
ಬೀದರ್: ಅಖಂಡ ಕರ್ನಾಟಕ ಹೂಗಾರ ಮಹಾಸಭಾ (ಬೆಂಗಳೂರು) ಬೀದರ್ ಜಿಲ್ಲಾ ಘಟಕದ ವತಿಯಿಂದ ಸೆಪ್ಟೆಂಬರ್ 27ರ ಭಾನುವಾರದಂದು ‘ಹೂಗಾರ ಮಾದಯ್ಯನವರ ಜಯಂತಿ’ಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಹಾಸಭಾದ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಹೂಗಾರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈ ಹಿಂದಿನ ವರ್ಷಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಮಾದಯ್ಯನವರ ಜಯಂತಿಯನ್ನು ಆಚರಿಸಲಾಗುತ್ತಿತ್ತು, ಆದರೆ ಇದೇ ಮೊದಲ ಬಾರಿಗೆ ಬೀದರ್‍ನ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಮುಖ್ಯ ಸಮಾರಂಭ ಆಯೋಜಿಸಲಾಗುತ್ತಿದೆ ಎಂದರು.
ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಬಸವೇಶ್ವರ ಚೌಕ್ (ನಯಾ ಕಮಾನ್) ನಿಂದ ಬೃಹತ್ ಮೆರವಣಿಗೆಯು ಪ್ರಾರಂಭವಾಗಲಿದೆ. ಮೆರವಣಿಗೆಯು ಮಹಾವೀರ ವೃತ್ತ, ಭಗತಸಿಂಗ್ ಸರ್ಕಲ್, ಅಂಬೇಡ್ಕರ್ ವೃತ್ತ, ಶಿವಾಜಿ ಚೌಕ್, ಹರಳಯ್ಯ ಚೌಕ್, ಮೋಹನ ಮಾರ್ಕೆಟ್, ಗುದಗೆ ಆಸ್ಪತ್ರೆ ಮುಂಭಾಗದಿಂದ ಹಾದು ರೋಟ್ರಿ ಸರ್ಕಲ್ ಮಾರ್ಗವಾಗಿ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರ ತಲುಪುವುದು ಎಂದು ವಿವರಿಸಿದರು.
ಮೆರವಣಿಗೆಯನ್ನು ಡಾ.ಗಂಗಾಂಬಿಕಾ ಅಕ್ಕ, ಸೋಮಶೇಖರ್ ಪಾಟೀಲ್ ಗಾದಗಿ, ರಜನೀಶ ವಾಲಿ, ದೀಪಕ ವಾಲಿ, ಹೂಗಾರ ಸಮಾಜದ ರಾಜ್ಯಾಧ್ಯಕ್ಷರಾದ ಬಸವರಾಜ ಹೂಗಾರ, ಜಿಲ್ಲಾಧ್ಯಕ್ಷರಾದ ಕಪಿಲ್ ಹೂಗಾರ ಸೇರಿದಂತೆ ಪ್ರಮುಖ ಗಣ್ಯರು ಈ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯದ ಪ್ರಭಾವಿ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಖುದ್ದಾಗಿ ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ವಿನಂತಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಅವರೆಲ್ಲರೂ ಭರವಸೆ ನೀಡಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಒಂದು ಮನವಿ ಪತ್ರ ಸಹ ಸಲ್ಲಿಸಲಾಗಿದೆ ಎಂದರು.
ಮೆರವಣಿಗೆ ಸಮಿತಿ ಅಧ್ಯಕ್ಷ ಮಂಜುನಾಥ ಹೂಗಾರ ಮಾತನಾಡಿ, ಈ ಜಯಂತಿ ಕೇವಲ ಹೂಗಾರ ಅಥವಾ ಫುಲಾರಿ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಎಲ್ಲಾ ಹಿಂದುಗಳು ಒಗ್ಗಟ್ಟಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.
ಸಮಾಜದ ಜಿಲ್ಲಾಧ್ಯಕ್ಷ ಕಪಿಲ ಹೂಗಾರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಹೂಗಾರ, ಸಮಾಜದ ಇತರೆ ಪದಾಧಿಕಾರಿಗಳಾದ ಹಣಮಂತಪ್ಪ ಹೂಗಾರ, ಸಿದ್ದು ಹೂಗಾರ, ಸತೀಶ ಹೂಗರ, ವಿಶ್ವಾ ಹೂಗಾರ, ಪ್ರಭುಶೆಟ್ಟಿ ಹೂಗಾರ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
ಹೂಗಾರ ನಿಗಮಕ್ಕೆ 100 ಕೋಟಿ ಅನುದಾನ ನೀಡಿ, ಕೂಡಲೇ ಅಧ್ಯಕ್ಷರನ್ನು ನೇಮಿಸಿ: ಸಿದ್ದು, ಫುಲಾರಿ
ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದು ಫುಲಾರಿ ಮಾತನಾಡಿ, ಈ ವರ್ಷ ಮಾದಣ್ಣನವರ 25ನೇ ವರ್ಷದ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹೂಗಾರ್ ಸಮಾಜದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ. ಹೂಗಾರ್ ಸಮಾಜವು ಕರ್ನಾಟಕದಲ್ಲಿಯೇ ಅತಿ ಸಣ್ಣ ಸಮಾಜವಾಗಿದ್ದು, ಕಳೆದ 40 ವರ್ಷಗಳಿಂದ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರೂ ಈವರೆಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ ಎಂದು ಹೇಳಿದರು.
2023ರಲ್ಲಿ ರಚನೆಯಾಗಿರುವ ಹೂಗಾರ್ ಮಾದಣ್ಣ ನಿಗಮ ಮಂಡಳಿಗೆ ಬಜೆಟ್‍ನಲ್ಲಿ 100 ಕೋಟಿ ಅನುದಾನ ಮೀಸಲಿಡಬೇಕು, ಈವರೆಗೆ ನಿಗಮ ಮಂಡಳಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ತಕ್ಷಣವೇ ಅನುದಾನ ಬಿಡುಗಡೆ ಮಾಡಿ, ನಿಗಮಕ್ಕೆ ಅಧ್ಯಕ್ಷರನ್ನು ಈ ಕೂಡಲೇ ನೇಮಕ ಮಾಡಬೇಕು. ಸಮಾಜದ ಶೈಕ್ಷಣಿಕ ಅಭಿವೃದ್ಧಿ, ಗುರುಪೀಠ, ವಿದ್ಯಾಸಂಸ್ಥೆ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರವು 15 ಎಕರೆ ಜಮೀನನ್ನು ಮಂಜೂರು ಮಾಡಬೇಕು. ಮುಂದಿನ ವರ್ಷದಿಂದ ಹೂಗಾರ್ ಮಾದಣ್ಣನವರ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಗೌರವಪೂರ್ವಕವಾಗಿ ಆಚರಿಸಬೇಕು ಎಂದವರು ತಿಳಿಸಿದರು.
ಸಣ್ಣ ಸಮಾಜಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಕಾಳಜಿ ಹೊಂದಿದ್ದು, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದರು.
























