
ಬೀದರ:ಜ.9:ತಾಲೂಕಿನ ಚಿಲ್ಲರ್ಗಿ ಗ್ರಾಮದ ಪಾಂಡುರಂಗ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಅಗತ್ಯವಾಗುವಂತೆ ಉಚಿತವಾಗಿ ಭೂದಾನ ಮಾಡಿದ ನರಸಿಂಗ ಠಾಕೂರ ಅವರನ್ನು ಬಿಜೆಪಿ ಮುಖಂಡ ಈಶ್ವರಸಿಂಗ ಠಾಕೂರ ಅವರ ನೇತೃತ್ವದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಗ್ರಾಮಸ್ಥರ ಧಾರ್ಮಿಕ ಆಸ್ಥೆಯ ಕೇಂದ್ರವಾಗಿರುವ ಪಾಂಡುರಂಗ ದೇವಸ್ಥಾನದ ಭವಿಷ್ಯ ಅಭಿವೃದ್ಧಿಗೆ ಈ ಭೂದಾನ ಮಹತ್ವದ ಮೈಲಿಗಲ್ಲಾಗಿದ್ದು, ಗ್ರಾಮದಲ್ಲಿ ಸಂತಸ ಹಾಗೂ ಹರ್ಷದ ವಾತಾವರಣ ನಿರ್ಮಾಣವಾಯಿತು.
ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಈಶ್ವರಸಿಂಗ ಠಾಕೂರ ಅವರು, ಪಾಂಡುರಂಗ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಸಮಾಜವನ್ನು ಒಗ್ಗೂಡಿಸುವ ಶಕ್ತಿಯ ಕೇಂದ್ರವಾಗಿದೆ. ದೇವಸ್ಥಾನದ ಸುತ್ತಮುತ್ತ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ, ಭಕ್ತರಿಗೆ ಅನುಕೂಲಕರ ವ್ಯವಸ್ಥೆ ಹಾಗೂ ಮುಂದಿನ ಪೀಳಿಗೆಗೆ ಶಾಶ್ವತ ಆಸ್ತಿಯಾಗಿ ಉಳಿಸಲು ಭೂಮಿ ಅತ್ಯವಶ್ಯಕವಾಗಿತ್ತು. ಈ ಹಿನ್ನೆಲೆಯಲ್ಲಿ ನರಸಿಂಗ ಠಾಕೂರ ಅವರಿಗೆ ಭೂದಾನ ಮಾಡುವಂತೆ ಮನವಿ ಮಾಡಲಾಗಿತ್ತು. ಎಲ್ಲರ ಮಾತಿಗೆ ಮೌಲ್ಯ ನೀಡಿ, ಸಮಾಜದ ಹಿತಕ್ಕಾಗಿ ಅವರು ಉಚಿತವಾಗಿ ಭೂಮಿ ದಾನ ಮಾಡಿರುವುದು ಅತ್ಯಂತ ಶ್ಲಾಘನೀಯ ಹಾಗೂ ಮಾದರಿ ಕಾರ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಅವರು, ಧಾರ್ಮಿಕ ಕಾರ್ಯಗಳಲ್ಲಿ ಇಂತಹ ದಾನಗಳ ಮೂಲಕ ಸಮಾಜದ ಬದ್ಧತೆ ಮತ್ತು ಸೇವಾಭಾವನೆ ಮತ್ತಷ್ಟು ಗಟ್ಟಿಯಾಗುತ್ತದೆ. ದೇವಸ್ಥಾನದ ಅಭಿವೃದ್ಧಿಗೆ ನನ್ನ ಕೈಲಾದಷ್ಟು ಸಹಕಾರ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನರಸಿಂಗ ಠಾಕೂರ ಅವರು, ಪಾಂಡುರಂಗ ದೇವಸ್ಥಾನವು ನಮ್ಮ ಊರಿನ ನಂಬಿಕೆ ಹಾಗೂ ಸಂಸ್ಕøತಿಯ ಪ್ರತೀಕವಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ನನ್ನಿಂದಾದಷ್ಟು ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನಗೆ ಸಂತಸ ತಂದಿದೆ. ಇದು ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಲಾಭಕ್ಕಾಗಿ ಮಾಡಿರುವ ಕಾರ್ಯವಲ್ಲ, ಸಮಾಜದ ಹಿತದೃಷ್ಟಿಯಿಂದ ಮಾಡಿರುವ ಸಣ್ಣ ಕೊಡುಗೆ ಎಂದು ವಿನಮ್ರವಾಗಿ ಹೇಳಿದರು. ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಗಾಂಧಿಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದೀಪಕ್ ಗಾದಗೆ, ಮಾಜಿ ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ, ಬಲರಾಜ ಠಾಕೂರ, ಜಿಲ್ಲಾ ಕಾರ್ಯದರ್ಶಿ ಲುಂಬಿಣಿ ಗೌತಮ, ವಿಷ್ಣುದಾಸ ಬಿಯಾನಿ, ಜುಲಾಬ ಸಿಂಗ, ಬಾಲರಾಜ ಠಾಕೂರ,ಸಂಜು ಕೋಳಾರೆ, ಶ್ರೀಕಾಂತ ಪಾಟೀಲ್, ಸಂಜು ಬಿರಾದಾರ, ಶ್ರೀನಿವಾಸ ರೆಡ್ಡಿ, ವಿಜಯಕುಮರ ಪಾಟೀಲ್ ಚಿಲ್ಲರ್ಗಿ, ವಿಠಲ್ ಚಿಂಚೋಳಿ,ಅರ್ಜುನ ಅಂಕಾರೆ,ಪುಂಡಲೀಕ ಸೇರಿದಂತೆ ಅನೇಕ ಹಿರಿಯ ಮುಖಂಡರು ಭಾಗವಹಿಸಿದ್ದರು. ಜೊತೆಗೆ ಸ್ಥಳೀಯ ಗಣ್ಯರು, ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಸನ್ಮಾನ ಸಮಾರಂಭದಲ್ಲಿ ನರಸಿಂಗ ಠಾಕೂರ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ದೇವಸ್ಥಾನ ಅಭಿವೃದ್ಧಿಗೆ ಕೈಜೋಡಿಸಿದ ದಾನಿಗಳನ್ನು ಸಾರ್ವಜನಿಕವಾಗಿ ಗೌರವಿಸುವುದು ಸಮಾಜದಲ್ಲಿ ಸೇವಾಭಾವನೆ ಬೆಳೆಸುವಲ್ಲಿ ಸಹಕಾರಿ ಎಂಬ ಅಭಿಪ್ರಾಯಗಳನ್ನು ಗಣ್ಯರು ವ್ಯಕ್ತಪಡಿಸಿದರು.
ಪಿಕೆಪಿಎಸ್ ಅಧ್ಯಕ್ಷರಾದ ಅರವಿಂÀದ ಪಾಟೀಲ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

























