
ಆಳಂದ: ತಾಲೂಕಿನ ಗುಂಜ ಬಬಲಾದ ಗ್ರಾಮದ ಶರಣೆ ಸುಶೀಲಾಬಾಯಿ ಬಸವಂತರಾವ ಪಾಟೀಲ ಅವರ ತೃತೀಯ ಲಿಂಗೈಕ್ಯ ಸ್ಮರಣೋತ್ಸವದ ಅಂಗವಾಗಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಕಲಬುರಗಿ ನಗರದ ಮಹಾದೇವಿ ತಾಯಿ ವೃದ್ಧಾಶ್ರಮದಲ್ಲಿ ಹಿರಿಯ ತಾಯಂದಿರಿಗೆ ಗೌರವ ಸಲ್ಲಿಸಿ, ಸೀರೆ ಹಾಗೂ ಹಣ್ಣುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಸ್ಮರಣೋತ್ಸವ ಆಚರಿಸಲಾಯಿತು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ. ಪಾಟೀಲ ಅವರು ತಮ್ಮ ಹಿರಿಯರ ಸ್ಮರಣಾರ್ಥ ವೃದ್ಧಾಶ್ರಮದ ಹಿರಿಯ ತಾಯಂದಿರಿಗೆ ಗೌರವ ಸಲ್ಲಿಸುವ ಮೂಲಕ ಮಾತೃಸ್ಮರಣೆಯನ್ನು ಸಮಾಜಸೇವೆಯೊಂದಿಗೆ ಬೆಸೆದರು. ಹಿರಿಯರೊಂದಿಗೆ ಆತ್ಮೀಯತೆ ಹಂಚಿಕೊAಡು, ಅವರಿಗೆ ಸೀರೆ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು. ಈ ಮೂಲಕ ಹಿರಿಯರ ಗೌರವ, ಆರೈಕೆ ಮತ್ತು ಸಾಮಾಜಿಕ ಕಳಕಳಿಯ ಸಂದೇಶ ಸಾರಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಡಾ. ರಾಜಶೇಖರ ಪಾಟೀಲ, ನಿವೃತ್ತ ಮುಖ್ಯಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ದೇವೇಂದ್ರಪ್ಪ ಗಣಮುಖಿ, ಸಾಹಿತಿ ವಿಶ್ವನಾಥ ಭಕರೆ, ಸಮಾಜಸೇವಕರಾದ ಪಂಡಿತರಾವ ಪಾಟೀಲ, ಕೇದರನಾಥ ಕುಲಕರ್ಣಿ, ವೃದ್ಧಾಶ್ರಮದ ವ್ಯವಸ್ಥಾಪಕಿ ಬಸಮ್ಮ ಕೆ. ಸ್ಥಾವರಮಠ ಸೇರಿದಂತೆ ವೃದ್ಧಾಶ್ರಮದ ಹಿರಿಯ ತಾಯಂದಿರು ಹಾಗೂ ಇತರರು ಭಾಗವಹಿಸಿದ್ದರು.





















