ಮರ್ಯಾದೆಗೇಡಿ ಹತ್ಯೆ: ದಲಿತ ಸ್ವರಾಜ್ಯ ಸೇನೆ ಖಂಡನೆ

ಸಂಜೆವಾಣಿ ವಾರ್ತೆ
ವಿಜಯಪುರ, ಡಿ. ೩೦: ಹುಬ್ಬಳ್ಳಿ ತಾಲೂಕಿನ ಇನಾಮ ವೀರಪುರ ಗ್ರಾಮದ ಮಾನ್ಯಾ ಪಾಟೀಲ್ ಸಹೋದರಿಯ ಮರ್ಯಾದೆಗೇಡಿ ಹತ್ಯೆ ಖಂಡಿಸಿ ದಲಿತ ಸ್ವರಾಜ್ಯ ಸೇನೆ ವತಿಯಿಂದ ಜಿಲ್ಲಾಡಳಿತದ ಮೂಲಕ ಸೋಮವಾರ ರಾಷ್ಟ್ರಪತಿಗಳಿಗೆ ಖಂಡನಾ ಪತ್ರ ಸಲ್ಲಿಸಿದರು.
ಈ ಘಟನೆಗೆ ಇಡೀ ಮಾನವ ಸಮಾಜವವೇ ತಲೆತಗ್ಗಿಸುವಂತೆ ಆಗಿದೆ. ಮಗಳ ಬಾಳಿನಲ್ಲಿ ಜನ್ಮದಾತನೇ ರಾಕ್ಷಸನಂತಾಗಿದ್ದಾನೆ ಎಂದು ಡಿಎಸ್‌ಎಸ್ ಅಧ್ಯಕ್ಷ ಗೌಡಪ್ಪ ಬಡಿಗೇರ ಖಂಡಿಸಿದರು. ಪೂರ್ಣ ವಯಸ್ಕರು ಒಪ್ಪಿ ಮದುವೆಯಾಗುವುದು ತಪ್ಪೇ. ಸಮಾಜದಲ್ಲಿ ಶೋಷಣೆಗೊಳಗಾದ ಎಲ್ಲ ಸಮುದಾಯಗಳಲ್ಲಿ, ಮಹಿಳಾ ಸಮುದಾಯ ಮೊದಲಾಗಿದೆ.
ಬಸಮ್ಮ, ಸೌಜನ್ಯ, ಬಿಲ್ಕಿಸ್ ಬಾನು, ನಿರ್ಭಯ, ದಾನಮ್ಮ, ರೇಣುಕಾ, ಈಗ ಮಾನ್ಯ ಪಾಟೀಲ್ ಹೀಗೆ ಭವಿಷ್ಯದಲ್ಲಿ ಇನ್ನಷ್ಟು ಅಮಾಯಕ ಸಹೋದರಿಯರ ಸಾವು ನೋವುಗಳಾಗಬಹುದು. ಇಂತಹ ಅಮಾಯಕರ ಸಾವುಗಳಿಗೆ ಕೊನೆಯೇ ಇಲ್ಲವೇ ಎನ್ನುವಂತಾಗಿದೆ. ಇನ್ನೂ ಇತಿಹಾಸ ಮರೆತೆ ಹೋಗಿರುವ ಅದೆಷ್ಟೋ ಪ್ರಕರಣಗಳು, ಭವಿಷ್ಯತ್ತಿನಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಕನ್ನಡ ಪರ ಮುಖಂಡ ಫಯಾಜ್ ಕಲಾದಗಿ ಮಾತನಾಡಿ, ಪುರುಷ ಪ್ರಧಾನ ಸಮಾಜ ಮತ್ತು ವರ್ಗ ಬೇಧ ವ್ಯವಸ್ಥೆ ಭಾರತವನ್ನು ನಲುಗಿಸಿದೆ. ಇದು ಅಖಂಡ ದೇಶಕ್ಕೆ ಅಪಾಯಕರ ಸೂಚನೆ. ಇಂತಹ ಅಮಾನವೀಯ ಪ್ರಕರಣಗಳು ಮೂರೇ ವರ್ಷಗಳಲ್ಲಿ ೧೩,೧೫೪ ಕೇಸ್‌ಗಳು ದಾಖಲಾಗಿವೆ. ೨೦೨೩-೨೪ರಲ್ಲಿ ೩೭೪೦, ೨೦೨೪-೨೫ರಲ್ಲಿ ೫೫೦೭ ಹಾಗೂ ೨೦೨೫-,೨೬ರಲ್ಲಿ ೩೯೦೭ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ೨೦೨೪-೨೫ರಲ್ಲಿಯೇ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದರು.
ಕೋಲಾರ ಜಿಲ್ಲೆಯ ಕಂಬಾಲಪಲ್ಲಿ, ಕೊಪ್ಪಳ ಜಿಲ್ಲೆಯ ಮರಕುಂಬಿ ಪ್ರಕರಣಗಳು ಕಣ್ಣ ಮುಂದೆ ಇದ್ದಾಗಿಯೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆಗೆ ಹಿನ್ನಡೆಯಾಗುತ್ತಿರುವುದು ಏಕೆ ಎಂಬ ಪ್ರಶ್ನೆ ಯಾಗಿದೆ. ಅನ್ಯಾಯ ಎಲ್ಲೆ ನಡೆದರೂ ಖಂಡಿಸುವುದು ಮಾನವ ಸಮಾಜದ ಕರ್ತವ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಅಮೃತ್, ಶರಣು, ಸಾಗರ್, ತೌಫಿಕ್, ಕನ್ನಡಪರ, ದಲಿತಪರ, ಬಸವಪರ ಹಾಗೂ ಸೂಫಿ ಪರ ಸಂಘಟನೆಗಳ ಮುಖಂಡರುಗಳಾದ ಜಗದೇವ ಸೂರ್ಯವಂಶಿ, ಡಾ. ರಫೀಕ್ ಗುರಿಕಾರ್, ಗಿರೀಶ್ ಕಲಘಟಗಿ, ನಾಗರಾಜ್, ಮಲ್ಲು ಇನ್ನಿತರ ಪದಾಧಿಕಾರಿ ಸದಸ್ಯರುಗಳು ಉಪಸ್ಥಿತರಿದ್ದರು.