ವೃತ್ತಿಯಲ್ಲಿ ಪ್ರಾಮಾಣಿಕತೆ:ಕಾಯಕದಲ್ಲಿ ನಿಷ್ಠೆ ಅಗತ್ಯ: ಶಾಂತಾಬಾಯಿ ರಾಸೂರ

ಬೀದರ:ಡಿ.12:ತಾವು ಆರಿಸಿಕೊಂಡಿರುವ ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ಕೈಗೊಂಡ ಕೆಲಸದಲ್ಲಿ ನಿಷ್ಠೆ ಉಳಿಸಿಕೊಂಡರೆ ಜೀವನದಲ್ಲಿ ಶ್ರೇಷ್ಠ ಯಶಸ್ಸು ಕಂಡುಬರಬಹುದು ಎಂದು ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕಿ ಶಾಂತಾಬಾಯಿ ಎಂ. ರಾಸೂರ ಅಭಿಪ್ರಾಯಪಟ್ಟರು.

ಅವರು ಚಿಟಗುಪ್ಪ ಪಟ್ಟಣದ ವೈದ್ಯಕೀಯ ಅಂಗಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗ್ರಾಹಕರು ಔಷಧ ಖರೀದಿಸಲು ಬಂದಾಗ ಹೆಚ್ಚು ಲಾಭದ ಆಮಿಷಕ್ಕೆ ಒಳಗಾಗದೆ ನ್ಯಾಯವಾದ ಬೆಲೆ ಪಡೆಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಫಾರ್ಮಾಸಿಸ್ಟ್‍ರ ಜವಾಬ್ದಾರಿ ಎಂದು ಹೇಳಿದರು.
‘ಛಲ ಬೇಕು ಶರಣಿಗೆ ಪರಧನವನೋಳ್ಳೆನೆಂಬ ವಚನವನ್ನು ಬದುಕಿನಲ್ಲಿ ಅನ್ವಯಿಸಬೇಕು’ ಎಂದು ಅವರು ಕರೆ ನೀಡಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಸರಸ್ವತಿಬಾಯಿ ರಿಬ್ಬನ್ ಕತ್ತರಿಸಿ ಅಂಗಡಿಯನ್ನು ಉದ್ಘಾಟಿಸಿದರು.

ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಮಾತನಾಡಿ, ಎಲ್ಲ ಕಾಯಿಲೆಗಳಿಗೆ ವೈದ್ಯರನ್ನು ಭೇಟಿ ಮಾಡುವ ಅವಕಾಶ ಇರೋದಿಲ್ಲ; ಸಣ್ಣಪುಟ್ಟ ಕಾಯಿಲೆಗಳಿಗೆ ಅಗತ್ಯವಾದ ಔಷಧಿಯ ಬಗ್ಗೆ ಮಾನವೀಯತೆಯಿಂದ ಉಚಿತ ಸಲಹೆ ನೀಡಬೇಕು ಎಂದು ಹೇಳಿದರು.

ಡಾ. ರಾಹುಲ್ ಉಪ್ಪಿನ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಫಾರ್ಮಾಸಿಸ್ಟ್ ಕೇದಾರ ಆರ್. ಔಷಧಿ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಕಾರ್ಯಕ್ರಮದಲ್ಲಿ ರೇಖಾ-ರಾಜಶೇಖರ್, ಮಲ್ಲಿಕಾರ್ಜುನ ರಾಸೂರ, ಮಂದಾಕಿನಿ, ವಿಜಯಕುಮಾರ್, ಜೈಶ್ರೀ ಭೀಮರಾವ, ಪ್ರವೀಣ, ಸಂತೋಷಕುಮಾರಿ, ಪ್ರಿಯಾಂಕಾ, ಸಾಗರ್, ಅಮರ್, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.