Home ಜಿಲ್ಲೆ ಹೋಳಿ ಹಬ್ಬ : ಗಮನ ಸೆಳೆದ ಅಣುಕು ಶವಯಾತ್ರೆ ಹಾಗೂ ಹನುಮಂತನ ಮೆರವಣಿಗೆ

ಹೋಳಿ ಹಬ್ಬ : ಗಮನ ಸೆಳೆದ ಅಣುಕು ಶವಯಾತ್ರೆ ಹಾಗೂ ಹನುಮಂತನ ಮೆರವಣಿಗೆ

ಔರಾದ :ಮಾ.6: ಪ್ರತಿ ವರ್ಷ ಹೋಳಿ ಹಬ್ಬದ ಮಾರನೇ ದಿನ ನಡೆಯುವ ಜಾನಪದ ಸೊಗಡಿನ ಸಾಂಪ್ರದಾಯಿಕ ಆಚರಣೆಯಾದ ಅಣುಕು ಶವ ಯಾತ್ರೆ ಹಾಗೂ ರಾತ್ರಿ ನಡೆಯುವ ಆನೆ ಮೇಲೆ ಹನುಮಂತನ ಸವಾರಿಯ ಮೆರವಣಿಗೆ ಬುಧವಾರ ಸಂಭ್ರಮದಿಂದ ಜರುಗಿತು.

ಔರಾದ ಪಟ್ಟಣದಲ್ಲಿ ಪ್ರತಿ ವರ್ಷ ಹೋಳಿ ಹಬ್ಬದ ಮಾರನೇ ದಿನ ನಡೆಯುವ ಪಾರಂಪರಿಕವಾಗಿ ನಡೆದು ಬರುತ್ತಿರುವ ಅಣುಕು ಶವಯಾತ್ರೆ ಹಾಗೂ ರಾತ್ರಿ ನಡೆಯುವ ಆನೆ ಮೇಲೆ ಹನುಮಂತನ ಸವಾರಿಯ ಮೆರವಣಿಗೆ ಅದ್ದೂರಿ ಹಾಗೂ ಸಡಗರದಿಂದ ಜರುಗಿತು. ಹೋಳಿ ಹುಣ್ಣಿಮೆಯ ಕಾಮ ದಹನದ ಮಾರನೇ ದಿನ ಬಣ್ಣ ಆಡಿದ ನಂತರ ಸಾಯಂಕಾಲ ಶವದ ಮೆರವಣಿಗೆ ನಡೆಯುತ್ತದೆ ಅದಾದನಂತರ ರಾತ್ರಿ ಆನೆ ಮೇಲೆ ಆಂಜನೇಯನ ಮೆರವಣಿಗೆ ನಡೆಯುತ್ತದೆ ಇದು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಪದ್ಧತಿ, ಮುಂಜಾನೆ ಬಣ್ಣದ ಒಕೂಳಿಯಲ್ಲಿ ಮಿಂದೆದ್ದ ಯುವಕರು ಸಾಯಂಕಾಲ ಶವದ ಅಣುಕು ಮೆರವಣಿಗೆ ನಡೆಸುತ್ತಾರೆ, ಪಟ್ಟಣದ ವಿವಿಧ ಓಣಿಗಳ ಮುಖಾಂತರ ಮೆರವಣಿಗೆ ಮಾಡಲಾಗುತ್ತದೆ. ಹಿರಿಯರು ಕಿರಿಯರೆನ್ನದೆ ಸರ್ವರೂ ಈ ಸಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪಟ್ಟಣದ ದೇಶಮುಖ ಪರಿವಾರದ ನೇತೃತ್ವದಲ್ಲಿ ಹಾಗೂ ಶೆಟಕಾರ ಓಣಿಯ ಸದಸ್ಯರಿಂದ ನಡೆಯುವ ಈ ಸಂಪ್ರದಾಯಿಕ ಆಚರಣೆ ವಿಶಿಷ್ಟವಾದದ್ದು, ಎರಡೂ ಒಣಿಗಳ ಶವಯಾತ್ರೆ ಹಾಗೂ ಆನೆ ಸವಾರಿ ನೋಡಲು ಪಟ್ಟಣದ ಜನ ಸೇರುತ್ತಾರೆ. ದಿನವೆಲ್ಲ ಬಣ್ಣದಲ್ಲಿ ಮಿಂದೆದ್ದ ಜನ ಸಾಯಂಕಾಲ ಈ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮ ಆಚರಿಸುತ್ತಾರೆ.

ನಂತರ ರಾತ್ರಿ ಎತ್ತಿನ ಬಂಡಿಯ ಮೇಲೆ ಆನೆಯನ್ನು ತಯಾರಿಸುತ್ತಾರೆ, ನಂತರ ಬಂಡಿಯನ್ನು ದೀಪಾಂಲಕಾರ ಮಾಡಿ ಆ ಆನೆಯ ಮೇಲೆ ಆಂಜನೇಯನ ವೇಷಧಾರಿಯನ್ನು ನಿಲ್ಲಿಸಿ ಅವರ ಕೈಯಲ್ಲಿ ಗಧೆಯನ್ನು ಹಿಡಿದು ಬ್ಯಾಂಡ್ ಬಾಜಾ ಭಜಂತ್ರಿಯೊಂದಿಗೆ ಪಟ್ಟಣದ ಶೆಟಕಾರ ಓಣಿ, ಪಠಾನ ಗಲ್ಲಿ, ದೇಶಮುಖ ಓಣಿ ಸೇರಿದಂತೆ ವಿವಿಧ ಬೀದಿಗಳಿಂದ ಮೆರವಣಿಗೆ ಮೂಲಕ ಹಬ್ಬ ಆಚರಣೆ ಮಾಡುವ ಸಂಪ್ರದಾಯವಿದೆ. ಈ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿ ಹಬ್ಬವನ್ನು ಆಚರಿಸುತ್ತಾರೆ.


ಸಂಸ್ಕøತಿ ಸಂಪ್ರದಾಯ ಉಳಿಸುವ ಕಾರ್ಯ ನಡೆಯಲಿ

ನಮ್ಮ ಭಾರತದ ಸಂಸ್ಕೃತಿ ಸಂಪ್ರದಾಯ ವಿಶಿಷ್ಟವಾದದ್ದು ಅದನ್ನು ಉಳಿಸಿ ಬೆಳೆಸುವ ಕಾರ್ಯ ಯುವಕರ ಮೇಲಿದೆ. ಪ್ರತಿಯೊಂದು ಹಬ್ಬದ ಆಚರಣೆಗಳು ವೈಚಾರಿಕತೆಯ ಪ್ರಜ್ಞೆ ಹುಟ್ಟಿಸುತ್ತದೆ. ನಮ್ಮ ಪೂರ್ವಜರ ಹಿರಿಯರ ಸಂಪ್ರದಾಯಿಕ ಆಚರಣೆಗಳು ನಾವೆಲ್ಲರೂ ಪಾಲಿಸುವ ಕಾರ್ಯ ಮಾಡಬೇಕಾಗಿದೆ.

ಸುನೀಲಕುಮಾರ ದೇಶಮುಖ
ಮಾಜಿ ಅಧ್ಯಕ್ಷರು, ಪಟ್ಟಣ ಪಂಚಾಯಿತಿ ಔರಾದ(ಬಾ)