
ಅಲಹಾಬಾದ್.ಆ೨೫:ಖಾಸಗಿ ಅನುದಾನರಹಿತ ಶಾಲೆಯಲ್ಲಿ ನಿಗದಿತ ಸಮವಸ್ತ್ರದೊಂದಿಗೆ ಹಿಜಾಬ್ (ಶಿರೋವಸ್ತ್ರ) ಧರಿಸಲು ಅನುಮತಿ ನೀಡಬೇಕೆಂದು ಕೋರಿ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಅಲಹಾಬಾದ್ ಹೈಕೋರ್ಟ್, “ಇಸ್ಲಾಂ ಧರ್ಮದಲ್ಲಿ ಶಾಲಾ ತರಗತಿಯೊಳಗೆ ಹಿಜಾಬ್ ಧರಿಸುವುದು ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪೂರಕ ಆಧಾರಗಳಿಲ್ಲ” ಎಂದು ಸ್ಪಷ್ಟಪಡಿಸಿದೆ.
ಪ್ರಯಾಗ್‌ರಾಜ್‌ನ ಅತ್ತರ್ಸುಯಾದಲ್ಲಿರುವ ‘ಟ್ಯಾಗೋರ್ ಪಬ್ಲಿಕ್ ಸ್ಕೂಲ್’ ಸಂಸ್ಥೆಯಲ್ಲಿ ೬ನೇ ತರಗತಿಯಿಂದ ೧೦ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದ ಸುಕೈನಾ ರಿಜ್ವಿ ಎಂಬ ಮುಸ್ಲಿಂ ಶಿಯಾ ಸಮುದಾಯದ ವಿದ್ಯಾರ್ಥಿನಿ, ೧೧ನೇ ತರಗತಿಯ ಪ್ರವೇಶಾತಿಯ ಸಂದರ್ಭದಲ್ಲಿಯೂ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೋರಿದ್ದಳು.
ಆದರೆ, ಶಾಲಾ ಆಡಳಿತ ಮಂಡಳಿಯು “ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಸಮವಸ್ತ್ರ ನೀತಿಯಿದ್ದು, ಇದಕ್ಕೆ ಹೆಚ್ಚುವರಿಯಾಗಿ ಹಿಜಾಬ್ ಧರಿಸಲು ಅವಕಾಶ ನೀಡಿದರೆ ಶಾಲಾ ಶಿಸ್ತು ಮತ್ತು ಸಮಾನತೆಗೆ ಧಕ್ಕೆಯಾಗುತ್ತದೆ” ಎಂದು ತಿಳಿಸಿ ಪ್ರವೇಶಾತಿಯನ್ನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿನಿ ತಾಯಿಯ ಮೂಲಕ ಅಲಹಾಬಾದ್ ಹೈಕೋರ್ಟ್‌ಗೆ ರಿಟ್ ಅರ್ಜಿ (ಸುಕೈನಾ ರಿಜ್ವಿ ವರ್ಸಸ್ ಉತ್ತರ ಪ್ರದೇಶ ಸರ್ಕಾರ ಮತ್ತು ಇತರರು) ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಅರ್ಜಿದಾರರ ವಾದವೇನು?
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಆಚರಣೆಯ ಭಾಗವಾಗಿದ್ದು, ಇದನ್ನು ತಡೆಯುವುದು ಸಂವಿಧಾನದ ವಿಧಿ ೧೪ (ಸಮಾನತೆಯ ಹಕ್ಕು), ವಿಧಿ ೧೯(೧)(ಎ) (ಅಭಿವ್ಯಕ್ತಿ ಸ್ವಾತಂತ್ರ್ಯ) ಹಾಗೂ ವಿಧಿ ೨೫ (ಧಾರ್ಮಿಕ ಸ್ವಾತಂತ್ರ್ಯ) ಅಡಿಯಲ್ಲಿನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ.
೬ರಿಂದ ೧೦ನೇ ತರಗತಿಯವರೆಗೆ ಶಾಲಾ ಆಡಳಿತ ಮಂಡಳಿ ಹಿಜಾಬ್ ಧರಿಸಲು ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಶಾಲಾ ಗುರುತಿನ ಚೀಟಿ ಮತ್ತು ಗುಂಪು ಛಾಯಾಚಿತ್ರಗಳಲ್ಲಿಯೂ ಶಿರೋವಸ್ತ್ರ ಧರಿಸಿರುವುದಕ್ಕೆ ಪುರಾವೆಗಳಿವೆ, ಆದ್ದರಿಂದ ಈಗ ನಿರಾಕರಿಸುವುದು ಸರಿಯಲ್ಲ ಎಂದು ವಾದಿಸಲಾಯಿತು.
ಶಾಲಾ ಆಡಳಿತ ಮಂಡಳಿ ಮತ್ತು ಸರ್ಕಾರದ ವಾದವೇನು:
ಶಾಲೆಯು ಜಾತ್ಯತೀತ ವಾತಾವರಣದಲ್ಲಿ ಎಲ್ಲ ಸಮುದಾಯದ ಮಕ್ಕಳಿಗೂ ಸಮಾನ ಶಿಕ್ಷಣ ನೀಡುತ್ತಿದ್ದು, ಬೋನಾಫೈಡ್ (ಸದುದ್ದೇಶದ) ಸಮವಸ್ತ್ರ ನಿಯಮವನ್ನು ಜಾರಿಗೆ ತಂದಿದೆ. ಕೇವಲ ಒಬ್ಬ ವಿದ್ಯಾರ್ಥಿಗೆ ಧಾರ್ಮಿಕ ಆಧಾರದಲ್ಲಿ ವಿನಾಯಿತಿ ನೀಡಿದರೆ ಶಾಲೆಯ ಶಿಸ್ತು ತಪ್ಪುತ್ತದೆ ಎಂದು ಆಡಳಿತ ಮಂಡಳಿ, ಉತ್ತರ ಪ್ರದೇಶ ಸರ್ಕಾರ ಹಾಗೂ ಸಿಬಿಎಸ್‌ಇ ಮಂಡಳಿ ಅರ್ಜಿಯನ್ನು ವಿರೋಧಿಸಿದವು.
ಹೈಕೋರ್ಟ್ ಪೀಠ ತೀರ್ಪಿನ ಸಾರಾಂಶ
ನ್ಯಾಯಮೂರ್ತಿ ಜೆ.ಜೆ. ಮುನಿರ್ ಮತ್ತು ನ್ಯಾಯಮೂರ್ತಿ ಇಂದ್ರಜೀತ್ ಶುಕ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಆಗಸ್ಟ್ ೨೧, ೨೦೨೬ ರಂದು ಈ ಕೆಳಗಿನ ಮಹತ್ವದ ಅಂಶಗಳನ್ನು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿತು:
ಸಂವಿಧಾನದ ವಿಧಿ ೨೫ರ ಅಡಿ ರಕ್ಷಣೆ ಪಡೆಯಲು ಕೇವಲ ವಾದ ಮಾಡಿದರೆ ಸಾಲದು, ಸೂಕ್ತ ಕಾನೂನಾತ್ಮಕ ಮತ್ತು ಧಾರ್ಮಿಕ ಆಧಾರಗಳಿರಬೇಕು. ಹಿಜಾಬ್ ಧರಿಸದಿದ್ದರೆ ಇಸ್ಲಾಂ ಧರ್ಮದ ಮೂಲ ತತ್ವಕ್ಕೆ ಭಂಗ ಬರುತ್ತದೆ ಅಥವಾ ಧರ್ಮದಿಂದ ಹೊರಹಾಕಲ್ಪಡುತ್ತಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಅಧಿಕೃತ ಧಾರ್ಮಿಕ ಗ್ರಂಥಗಳನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.
ಕರ್ನಾಟಕದ ಹಿಜಾಬ್ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಭಿನ್ನ ತೀರ್ಪು ಬಂದಿದ್ದು, ಅಂತಿಮ ತೀರ್ಪು ಕಾಯ್ದಿರಿಸಲ್ಪಟ್ಟಿದೆ. ಆದರೆ, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದ್ದ ’ಕರ್ನಾಟಕ ಹೈಕೋರ್ಟ್‌ನ ಪೂರ್ಣಪೀಠದ ತೀರ್ಪು’ ಅತ್ಯಂತ ಪ್ರಭಾವಶಾಲಿ ಮೌಲ್ಯ ಹೊಂದಿದ್ದು, ಅದಕ್ಕಿಂತ ವಿಭಿನ್ನ ನಿಲುವು ತಳೆಯಲು ಯಾವುದೇ ಕಾರಣವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿತು.
ಸಮವಸ್ತ್ರ ನೀತಿಯು ಧರ್ಮನಿರಪೇಕ್ಷ ವಾತಾವರಣವನ್ನು ನಿರ್ಮಿಸುತ್ತದೆ ಮತ್ತು ಮಕ್ಕಳಲ್ಲಿ ಸಮಾನತೆಯನ್ನು ತರುತ್ತದೆ. ಶಾಲೆಯ ನಿಯಮಾವಳಿಗಳು ತಾರತಮ್ಯರಹಿತವಾಗಿದ್ದಾಗ, ಅದನ್ನು ಜಾರಿಗೊಳಿಸುವ ಸಂಪೂರ್ಣ ಹಕ್ಕು ಶಾಲಾ ಆಡಳಿತ ಮಂಡಳಿಗೆ ಇರುತ್ತದೆ.
ಹಿಂದೆ ಶಾಲಾ ಆಡಳಿತವು ಹಿಜಾಬ್‌ಗೆ ಆಕ್ಷೇಪಿಸದಿರುವುದು (ಅದು ನಿಷ್ಕ್ರಿಯತೆ ಅಥವಾ ಸೌಜನ್ಯದಿಂದ ಇರಬಹುದು) ಮುಂದೆ ಪ್ರವೇಶಾತಿ ನೀಡುವಾಗಲೂ ಅದೇ ವಿನಾಯಿತಿ ನೀಡಬೇಕು ಎಂಬ ಶಾಶ್ವತ ಅಥವಾ ಕಾನೂನಾತ್ಮಕ ಹಕ್ಕನ್ನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು.


































