ವೈಜ್ಞಾನಿಕ ಆಧಾರಿತ ಕೃಷಿಯಿಂದ ಅಧಿಕ ಇಳುವರಿ ಡಾ.ಜಾಧವ

ಭಾಲ್ಕಿ :ನ.೧೧: ಕಬ್ಬು ವಾಣಿಜ್ಯ ಬೆಳೆಯಾಗಿದ್ದು,ಕಬ್ಬಿನ ಪ್ರತಿಯೊಂದು ಭಾಗವು ಲಾಭದಾಯಕವಾಗಿರುವ ಕಾರಣ ರೈತರು ವೈಜ್ಞಾನಿಕ ಆಧಾರಿತ ಕೃಷಿಯಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದು ಬೀದರನ ಎಆರ್‌ಎಸ್ ಸೈಂಟಿಸ್ಟ್ ಡಾ.ಆರ್.ಎಲ್.ಜಾಧವ ಅಭಿಪ್ರಾಯಪಟ್ಟರು.
ತಾಲೂಕಿನ ಕಣಜಿ ಗ್ರಾಮದ ಶೇಷರಾವ ಕಣಜಿ ಅವರ ಹೊಲದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಬೀದರ ಮತ್ತು ಪ್ರಗತಿಪರ ರೈತ ಶೇಷರಾವ ಕಣಜಿಕರ್ ಅವರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ಕಬ್ಬಿನ ಬೆಳೆ ಚರ್ಚಾಕೂಟ ಹಾಗೂ `ಕಡಿಮೆ ಖರ್ಚಿನಲ್ಲಿ ಜಾಸ್ತಿ ಇಳುವರಿ’ ಮತ್ತು ೨೦೨೫-೨೬ನೇ ಸಾಲಿನ ರೈತ/ರೈತ ಮಹಿಳೆಯರಿಗಾಗಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಬ್ಬಿನ ಅಧಿಕ ಇಳುವರಿಗಾಗಿ ಕ್ಯಾಲ್ಸಿಯಂ ಪ್ರಮಾಣ ಹೊಂದಿದ ಕಡಿಮೆ ಬೆಲೆಯಲ್ಲಿ ದೊರಕುವ ಟಿಎಸ್‌ಪಿ ಗೊಬ್ಬರ ಬಳಸಬೇಕು.ಮೇಲ್ಭಾಗದ ಎಲೆಗಳು ಬಿಟ್ಟು ಕೆಳಬಾಗದ ಎಲೆಗಳಿಂದ ಕಬ್ಬು ಕಟ್ಟಬೇಕು.ಯಾವುದೇ ಕಾರಣಕ್ಕೂ ರೈತರು ಕಬ್ಬಿನ ವಾಡಿ ಸುಡಬಾರದು.ರೈತರು ತಾವು ಬೆಳೆಯುವ ಬೆಳೆಗಳ ಗುಣಧರ್ಮ ಅರಿತು ಬೆಳೆ ಬೆಳೆಸಿದರೆ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ನಿವೃತ್ತ ವಿಜ್ಞಾನಿ ಡಾ.ಸಿ.ಆರ್.ಕೊಂಡಾ ಮಾತನಾಡಿ, ಜಿಪ್ಸಂ ಗೊಬ್ಬರ ಮತ್ತು ಬೀಜೋಪಚಾರ ಮೂಲಕ ಭೂಮಿ ಫಲವತ್ತತೆ ಕಾಪಾಡಿಕೊಂಡು ಸಕಾಲದಲ್ಲಿ ಕಬ್ಬಿನ ನಾಟಿ ಮಾಡಿದಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ,ಸಾವಯವ ಗೊಬ್ಬರದೊಂದಿಗೆ ರಾಸಾಯನಿಕ ಗೊಬ್ಬರ ಬಳಸುವುದು ಅಗತ್ಯ.ರೈತರು ಹುಲ್ಲು ಸಾಯಿಸುವ ಔಷಧ ಸಿಂಪರಣೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ.ಯಾವುದೇ ಕಾರಣಕ್ಕೂ ಹುಲ್ಲು ಸಾಯಿಸುವ ಔಷಧ ಬಳಸಬಾರದು ಎಂದು ತಾಕೀತು ಮಾಡಿದರು.
ಕಲಬುರ್ಗಿ ಕೃಷಿ ಕಾಲೇಜಿನ ನಿವೃತ್ತ ಡೀನ್ ಡಾ.ಸುರೇಶ ಪಾಟೀಲ್,ಬೀದರನ ಕೆವಿಕೆಯ ನಿವೃತ್ತ ಮುಖ್ಯಸ್ಥ ಡಾ.ರವಿ ದೇಶಮುಖ ಅವರು ಮಾತನಾಡಿ,ಎಳ್ಳು,ನವಣೆ,ಸಜ್ಜೆ,ಔರಿಕಾಯಿ ಸೇರಿದಂತೆ ಇತರೆ ವಾಣಿಜ್ಯ ಬೆಳೆಸಲು ರೈತರು ಆಸಕ್ತಿ ತೋರಬೇಕು ಎಂದು ಹೇಳಿ,ರೈತರು ಕೇಳಿದ ಸಂಶಯಾಸ್ಪದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಅಣದೂರೆ ಅಧ್ಯಕ್ಷತೆ ವಹಿಸಿ , ರೈತರಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಭ್ಯಗಳನ್ನು ಕೃಷಿ ಇಲಾಖೆಯವರು ಸಕಾಲದಲ್ಲಿ ಒದಗಿಸಬೇಕು ಎಂದರು.ರೈತ ಸಂಘದ ತಾಲೂಕು ಅಧ್ಯಕ್ಷ ಬಾಬುರಾವ ಜೋಳದಾಪ್ಕೆ ಮಾತನಾಡಿದರು.ಪ್ರಗತಿಪರ ರೈತರಾದ ಮಾಣಿಕ ದೇಶಮುಖ,ಕರಬಸಯ್ಯ ಸಿಂದಬAದಗಿ,ಬಸನಾಳೆ ಮಾತನಾಡಿ,ರಾಸಾಯನಿಕ ಗೊಬ್ಬರ ಬಳಸದೆ ,ಕಳೆ ಕಳೆಯಲು ಸೆಣಬು ಬೆಳೆಸಿ, ಡ್ರೀಪ್ ನೀರಾವರಿಯಿಂದ ಕಬ್ಬಿನ ಜೊತೆಯಲ್ಲಿ ಟೊಮೇಟೋ,ತರಕಾರಿ, ಇನ್ನೀತರ ಬೆಳೆಗಳನ್ನು ಬೆಳೆದು ಅಧಿಕ ಲಾಭ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.
ಪ್ರಗತಿಪರ ರೈತ ಶೇಷರಾವ ಕಣಜಿಕರ,ರೈತ ಸಂಘದ ಕಾರ್ಯದರ್ಶಿ ದಯಾನಂದ ಸ್ವಾಮಿ,ರಾಜಕುಮಾರ ಎಡಿಎ,ತೋಟಗಾರಿಕೆ ಕಾಲೇಜಿನ ಡಾ.ರಾಜಕುಮಾರ ಗೌಳಿ,ಸುಭಾಷರಾವ ಕಣಜಿಕರ,ಸಂಜೀವಕುಮಾರ ಕಣಜಿಕರ್,ಭಾವುರಾವ ಪಾಟೀಲ,ಗಾಜರೆ,ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ,ಹಣಮಂತರಾವ ಪಾಟೀಲ,ಚನ್ನಬಸಪ್ಪ ಪಾಟೀಲ್,ಅನೀಲ ರಂಜೇರಿ,ದಿಲೀಪ ಪಾಟೀಲ್ ಸೇರಿದಂತೆ ಜಿಲ್ಲಾ ಕಬ್ಬು ಬೆಳೆಗಾರರು ,ರೈತರು ಪಾಲ್ಗೊಂಡಿದ್ದರು.


ರೈತರ ಹಿತ ಕಾಪಾಡಿ..
`ಬೀದರ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ಸರ್ಕಾರ ಘೋಷಿಸಿದ ರೈತರ ಕಬ್ಬಿನ ಬೆಲೆ ನಿಗದಿ ಪಡಿಸಬೇಕು.ರಿಕವರಿ ನೆಪದಲ್ಲಿ ರೈತರಿಗೆ ಹಾನಿ ಮಾಡಬಾರದು.ಪ್ರಸ್ತುತ ಸಾಲಿನಲ್ಲಿ ಅತಿವೃಷ್ಠಿಯಿಂದ ರೈತರು ಕಂಗಾಲಾಗಿದ್ದಾರೆ.ರೈತ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂಬುದನ್ನು ಸರ್ಕಾರ ಅರಿತುಕೊಂಡಿರಬೇಕು.’
-ಬಾಬುರಾವ ಜೋಳದಾಪ್ಕೆ ಅಧ್ಯಕ್ಷರು ರೈತ ಸಂಘ ಭಾಲ್ಕಿ.