
ಅರಸೀಕೆರೆ, ಮಾ. ೨೧- ತಾಲ್ಲೂಕಿನ ಅಮ್ಮನಟ್ಟಿ ಗ್ರಾಮದ ಶ್ರೀ ಗಂಗಾಮಾಳಿಕ ದೇವಿಯವರ ಹುಂಡಿ ಹಣದ ವಿಷಯದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತು ಅವರ ಹಿಂಬಾಲಕರು ನಮ್ಮ ಬಗ್ಗೆ ಅನೇಕ ಇಲ್ಲ ಸಲ್ಲದ ಆರೋಪವನ್ನು ಮಾಡಿದ್ದರು. ಆ ಎಲ್ಲಾ ಆರೋಪಗಳಿಗೂ ಸೂಕ್ತವಾಗಿ ಹೈಕೋರ್ಟ್ ಆದೇಶ ಬಂದಿರುತ್ತದೆ ಮತ್ತು ಅವರು ಮಾಡಿರುವ ಎಲ್ಲ ಆರೋಪ ಸತ್ಯಕ್ಕೆ ನಿರಾಧಾರವಾದದ್ದು, ಸತ್ಯಕ್ಕೆ ದೂರವಾದದ್ದು ಎಂದು ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಗಂಗಾಮಾಳಿಕ ದೇವಿಯವರ ಜಾತ್ರಾ ಮಹೋತ್ಸವ ಮಾಡದಂತೆ ನಿಲ್ಲಿಸಲು ಅನೇಕ ಕುತಂತ್ರಗಳನ್ನು ಉಪಯೋಗಿಸಿದರು. ಆದರೆ ದೇವಿಯ ಕೃಪೆ ಇರುವುದರಿಂದ ಒಂದೇ ದಿನದಲ್ಲಿ ಹೈಕೋರ್ಟ್‌ನಲ್ಲಿ ಆದೇಶವಾಯಿತು ಎಂದರು.
ಜಾತ್ರಾ ಮಹೋತ್ಸವ ಮಾಡಲು ಆದೇಶ ನೀಡಿರುವುದರಿಂದ ಮತ್ತು ಜಾತ್ರೆಗೆ ಸೂಕ್ತ ಬಿಗಿ ಬಂದೋಬಸ್ತ್ ನೀಡಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ತಾಲ್ಲೂಕು ದಂಡಾಧಿಕಾರಿ ಅವರಿಗೆ ಹೈಕೋರ್ಟ್ ಆದೇಶ ಮಾಡಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ. ಶಾಸಕ ಶಿವಲಿಂಗೇಗೌಡ ಅವರು ಇನ್ನು ಮುಂದೆಯಾದರೂ ಸಹ ಜಾತಿಗಳ ನಡುವೆ ವಿಷಬೀಜ ಬಿತ್ತುವುದನ್ನು ಬಿಡಬೇಕು. ಇಲ್ಲದಿದ್ದರೆ ಜನ ಅವರಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ತಿಳಿಸಿದರು.
ದುಮ್ಮೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಜಯ್ ಮಾತನಾಡಿ, ನಾವು ನಮ್ಮ ದೇವಿಯ ಹಣದಿಂದ ಚಿನ್ನವನ್ನು ಖರೀದಿಸಿ ತಂದಿದ್ದೇವೆ. ಅದಕ್ಕೆ ಸಂತೋಷ್ ಅವರು ಸಹಾಯ ಮಾಡಿದ್ದಾರೆ ಹೊರತು ಅವರು ಯಾವುದೇ ರೀತಿ ಹಣವನ್ನು ತೆಗೆದುಕೊಂಡು ಹೋಗಿಲ್ಲ. ಶಾಸಕರು ಮತ್ತು ಅವರ ಹಿಂಬಾಲಕರು ಈ ಚಿತಾವಣೆ ಮಾಡಿಕೊಂಡು ಅವರ ಮೇಲೆ ಇಲ್ಲ ಸಲದ ಆರೋಪ, ಕುತಂತ್ರವನ್ನು ಮಾಡಿದರು. ಆದರೆ ಅದಕ್ಕೆ ತಕ್ಕ ಪಾಠ ಅವರಿಗೆ ಈಗ ತಿಳಿದಿದೆ. ಹೈಕೋರ್ಟ್ ಆದೇಶವು ದೇವಿಯವರ ಕೃಪೆಯಿಂದ ಆಗಿರುವುದರಿಂದ ಜಾತ್ರೆ ಯುಗಾದಿ ಹಬ್ಬದ ದಿನ ಸುಗಮವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷರಾದ ಮಹಾಲಿಂಗಪ್ಪ, ಗಂಗಣ್ಣ, ಶಿವಲಿಂಗಪ್ಪ ಉಪಸ್ಥಿತರಿದ್ದರು.























