ಪಥಸಂಚಲನಕ್ಕೆ ಹೈಕೋರ್ಟ್ ತಡೆ

ನ೨ರಂದು ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅವಕಾಶ, ಅ.೨೪ಕ್ಕೆ ವಿಚಾರಣೆ ಮುಂದೂಡಿಕೆ

ಕಲ್ಬುರ್ಗಿ, ಅ. ೧೯- ಸರ್ಕಾರ ಮತ್ತು ಆರ್‌ಎಸ್‌ಎಸ್ ನಡುವಿನ ಜಟಾಪಟಿ ತಾರಕಕ್ಕೇರಿರುವಾಗಲೇ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆಯವರ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಇಂದು ತನ್ನ ಶಕ್ತಿ ಪ್ರದರ್ಶನದ ಭಾಗವಾಗಿ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ರಾಜ್ಯ ಹೈಕೋರ್ಟ್ ಅವಕಾಶ ನಿರಾಕರಿಸಿದೆ.


ನವೆಂಬರ್ ೨ ರಂದು ಪಥಸಂಚಲನ ನಡೆಸುವ ಆಯ್ಕೆಯನ್ನು ಮುಕ್ತವಾಗಿಟ್ಟು, ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಅ. ೨೪ಕ್ಕೆ ಮುಂದೂಡಲಾಗಿದೆ.
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿರುವ ಸ್ಥಳೀಯ ಆಡಳಿತದ ತೀರ್ಮಾನವನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಕಲ್ಬುರ್ಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಅವರು ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಇಂದು ನಡೆಸಿದ ರಾಜ್ಯ ಹೈಕೋರ್ಟ್‌ನ ಕಲ್ಬುರ್ಗಿ ವಿಭಾಗೀಯ ಪೀಠ ಚಿತ್ತಾಪುರದಲ್ಲಿ ಒಂದೇ ದಿನ ಆರ್‌ಎಸ್‌ಎಸ್ ಪಥಸಂಚಲನ ಮತ್ತು ದಲಿತ ಸಂಘಟನೆಗಳ ರ್ಯಾಲಿಗೆ ಅವಕಾಶ ನೀಡದಂತೆ ಸರ್ಕಾರಕ್ಕೆ ಸೂಚನೆ ನೀಡಿತು.


ಹೈಕೋರ್ಟ್‌ನ ಈ ಆದೇಶದಿಂದ ಇಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ನಿರ್ಧರಿಸಿದ್ದ ಆರ್‌ಎಸ್‌ಎಸ್ ಪಥಸಂಚಲನ ಮತ್ತು ಅದಕ್ಕೆ ಪ್ರತಿಯಾಗಿ ರ್ಯಾಲಿಗೆ ಮುಂದಾಗಿದ್ದ ಭೀಮ್ ಆರ್ಮಿಗೆ ಸದ್ಯ ಅವಕಾಶ ಇಲ್ಲದಂತಾಗಿದೆ.


ಪಥಸಂಚಲನ ನಡೆಸಲು ಅವಕಾಶ ನೀಡದ ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾ. ಎಂ.ಜಿ.ಎಸ್. ಕಮಲ್ ರವರ ನ್ಯಾಯಪೀಠ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವುದರಿಂದ ಹಲವು ಸಂಘಟನೆಗಳು ಒಂದೇ ದಿನ ಒಂದೇ ಸ್ಥಳ ಮತ್ತು ಒಂದೇ ಮಾರ್ಗದಲ್ಲಿ ರ್ಯಾಲಿ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ ವಕೀಲರು ಮನವಿ ಮಾಡಿದ್ದಾರೆ. ಆ ಕಾರಣದಿಂದ ಸಂಘಟನೆಗಳಿಗೆ ಪ್ರತ್ಯೇಕ ದಿನದಂದು ರ್ಯಾಲಿ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದೆ.


ಇಂದೇ ಹೊಸದಾಗಿ ಮನವಿ ಸಲ್ಲಿಸಿ ಯಾವ ಮಾರ್ಗದಲ್ಲಿ ರ್ಯಾಲಿ ನಡೆಸಲಾಗುತ್ತದೆ ಎಂಬುದನ್ನು ತಿಳಿಸಿ, ಜಿಲ್ಲಾಡಳಿತ ಮತ್ತು ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಿದೆ ಎಂದು ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ.


ಈ ಅರ್ಜಿಯನ್ನು ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿ, ವಿಚಾರಣೆಯನ್ನು ಇದೇ ತಿಂಗಳು ೨೪ಕ್ಕೆ ಮುಂದೂಡಿದೆ.