
ಬೆಂಗಳೂರು,ಜೂ.೫:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ನಡೆಸಲಿದೆ.
ಇಂದು ಬೆಳಿಗ್ಗೆ ರಾಜ್ಯಹೈಕೋರ್ಟಿನ ಕಲಾಪಗಳು ಆರಂಭವಾಗುತ್ತಿದ್ದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ. ವಿ ಕಾಮೇಶ್ವರರಾವ್‌ನೇತೃತ್ವದ ವಿಭಾಗೀಯ ಪೀಠ ಕಾಲ್ತುಳಿತ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿತು. ರಾಜ್ಯ ಹೈಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧರಿಸಿ ಪಿಐಎಲ್ ದಾಖಲಿಸಿಕೊಳ್ಳುತ್ತೇವೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರರಾವ್ ಹೇಳಿದರು.
ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.ಮಧ್ಯಾಹ್ನ ೨.೩೦ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದ್ದೇವೆ. ಸರ್ಕಾರ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ಕೊಡಿ ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ಅಡ್ವಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಸೂಚಿದರು.
ಹಂಗಾಮಿ ನ್ಯಾಯಮೂರ್ತಿಗಳ ಸೂಚನೆಗೆ ಪ್ರತಿಕ್ರಿಯಿಸಿದ ಅಡ್ವಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ರಾಜ್ಯಸರ್ಕಾರ ಘಟನೆಯ ಬಗೆ ಮ್ಯಾಜಿಸ್ಟ್ರಿಯಲ್‌ಗೆ ಆದೇಶಿಸಿದೆ. ನ್ಯಾಯಪೀಠ ನೀಡುವ ಸೂಚನೆಯನ್ನು ಪಾಲಿಸುತ್ತೇವೆ.ಸರ್ಕಾರದ ಭದ್ರತಾ ಕ್ರಮಗಳ ಬಗ್ಗೆ
ಮಾಹಿತಿ ನೀಡಲಾಗುವುದು ಎಂದರು. ಇದಾದ ಬಳಿಕ ನ್ಯಾಯಪೀಠ ವಿಚಾರಣೆಯನ್ನು ಮಧ್ಯಾಹ್ನ ೨.೩೦ಕ್ಕೆ ಮುಂದೂಡಿತು.
ರಾಜ್ಯಸರ್ಕಾರ ಈ ಘಟನೆಯ ಬಗ್ಗೆ ಈಗಾಗಲೇ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿ
ಜಗದೀಶ್ ಅವರು ಕಾಲ್ತುಳಿತದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಸರ್ಕಾರದಿಂದ ಮ್ಯಾಜಿಸ್ಟ್ರಿಯಲ್ ತನಿಖೆ ನಡೆದಿದ್ದರೂ ರಾಜ್ಯಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಆರ್‌ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಪೊಲೀಸರೂ ಸಹ ಜನರನ್ನು ನಿಯಂತ್ರಿಸಲು ವಿಫಲರಾಗಿದ್ದರು. ಒಮ್ಮೆಗೆ ಎಲ್ಲರೂ ಕ್ರೀಡಾಂಗಣಕ್ಕೆ ನುಗ್ಗಲು ಮುಂದಾದಾಗ ಕಾಲ್ತುಳಿತ ಸಂಭವಿಸಿ ೧೧ ಮಂದಿ ಮೃತಪಟ್ಟು, ೪೩ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರಿಂದ ಸಂಭ್ರಮದ ವಾತಾವರಣ ಸೂತಕವಾಗಿ ಮಾರ್ಪಟ್ಟು ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ತರಾತುರಿಯಲ್ಲೇ ಮುಗಿಸಲಾಗಿತ್ತು.

ವಿಧಾನಸೌದ ಮೆಟ್ಟಲುಗಳ ಮೇಲೆ ಆರ್ ಸಿಬಿ ಆಟಗಾರರಿಗೆ ಸನ್ಮಾನ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಫುಟ್ ಪಾತ್ ನಲ್ಲಿ ಅಳವಡಿಸಲಾಗಿದ್ದ ಗ್ರಿಲ್ ಕುಸಿದು ಬಿದ್ದಿರುವುದು
ಆರ್‌ಸಿಬಿಯ ಗೆಲುವನ್ನು ಸಂಭ್ರಮಿಸಬೇಕಿದ್ದ ಹೊತ್ತಿನಲ್ಲೇ ಈ ದುರ್ಘಟನೆ ನಡೆದು ಹಲವರ ಜೀವ ಬಲಿಯಾಗಿದ್ದು, ಎಲ್ಲರ ನೋವಿಗೆ ಕಾರಣವಾಗಿದೆ. ಇಂತದೊಂದು ದುರ್ಘಟನೆ ನಡೆಯಬಾರದಿತ್ತು. ಅಮಾಯಕರ ಸಾವು ಆಗಬಾರದಿತ್ತು ಎಂಬ ಪ್ರತಿಯೊಬ್ಬರ ಮನದಲ್ಲಿ ಮನೆ ಮಾಡಿತು.
ಈ ದುರ್ಘಟನೆಗೂ ಮೊದಲು ವಿಧಾನಸೌಧದ ಮುಂದೆ ನಿನ್ನೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಟಗಾರರನ್ನು ಸರ್ಕಾರದ ಪರವಾಗಿ ಗೌರವಿಸಿದ್ದರು. ಆ ಕಾರ್ಯಕ್ರಮ ಸಂದರ್ಭದಲ್ಲೂ ವಿಧಾನಸೌಧದ ಒಳ ನುಗ್ಗಲು ಪ್ರಂiiತ್ನಿಸಿ ದಾಂಧಲೆ ನಡೆಸಿದ್ದರು ಲಕ್ಷಾಂತರ ಮಂದಿ ವಿಧಾನಸೌಧದ ಮುಂದೆ ಜಮಾಯಿಸಿದ್ದರು. ವಿಧಾನಸೌಧ ಪ್ರವೇಶಿಸಲು ಸಾಧ್ಯವಾಗದ ಜನ ಕ್ರಿಕೆಟ್ ಸ್ಟೇಡಿಯಂನತ್ತ ತೆರಳಿದ್ದರು. ಕ್ರೀಡಾಂಗಣದಲ್ಲೂ ಗೇಟ್‌ಗಳನ್ನು ಬಂದ್ ಮಾಡಲಾಗಿತ್ತು. ಆದರೂ ಜನರ ಒತ್ತಡಕ್ಕೆ ಮಣಿದು ಗೇಟ್‌ಗಳನ್ನು ತೆರೆದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದ ದುರಂತ ಸಂಭವಿಸಿದೆ.
ತನಿಖಾ ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ:ಪರಂ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಕಾಲ್ತುಳಿತದ ದುರಂತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮ್ಯಾಜಿಸ್ಟ್ರಿಯರ್ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆಮಾತನಾಡಿದ ಗೃಹ ಸಚಿವರು, ಈ ದುರಂತಕ್ಕೆ ಯಾರು ಕಾರಣ, ಯಾವ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎಲ್ಲವೂ ಮ್ಯಾಜಿಸ್ಟ್ರಿಯಲ್ ತನಿಖೆಯಲ್ಲಿ ಗೊತ್ತಾಗಲಿದೆ. ತನಿಖೆಯ ವರದಿಯಾಧರಿಸಿ ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾಜ್ಯಸರ್ಕಾರ ಆರ್‌ಸಿಬಿಗಾಗಲಿ, ಕರ್ನಾಟಕ ಕ್ರಿಕೆಟ್ ಸಂಸ್ಥೆಗಾಗಲಿ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಹೇಳಿರಲಿಲ್ಲ. ಆರ್‌ಸಿಬಿಯವರೇ ಇಡೀ ತಂಡವನ್ನು ಬೆಂಗಳೂರಿಗೆ ಕರೆತಂದದ್ದು, ಆಗ ಸಹಜವಾಗಿಯೇ ಬೆಂಗಳೂರು ತಂಡ ಎಂಬ ಕಾರಣಕ್ಕೆ ರಾಜ್ಯಸರ್ಕಾರ ಆಟಗಾರರನ್ನು ಸನ್ಮಾನಿಸಿತು ಅಷ್ಟೆ. ಏನೇ ಇರಲಿ ದುರಂತ ಸಂಭವಿಸಿರುವುದಕ್ಕೆ ನೋವಿದೆ. ಈ ದುರಂತ ಆಗಬಾರದಿತ್ತು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.