Home ಜಿಲ್ಲೆ ತನಿಖೆಗೆ ಲೋಕಾಯುಕ್ತಕ್ಕೆ ಹೈಕೋರ್ಟ್ ಆದೇಶ

ತನಿಖೆಗೆ ಲೋಕಾಯುಕ್ತಕ್ಕೆ ಹೈಕೋರ್ಟ್ ಆದೇಶ

ಬೀದರ್:ಮಾ.11: ಅಂಗನವಾಡಿಗಳಿಗೆ ಆಹಾರ ಪೂರೈಸುವಲ್ಲಿ ಔರಾದ್ ಶಾಸಕ ಪ್ರಭು ಚವಾಣ್ ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕಲಬುರಗಿ ಹೈಕೋರ್ಟ್ ಪೀಠವು ಲೋಕಾಯುಕ್ತಕ್ಕೆ ಆದೇಶ ನೀಡಿದೆ.
ಔರಾದನ ಮುಖಂಡ ದೀಪಕ್ ಪಾಟೀಲ ಚಾಂದೋರಿ ಅವರು ಸಲ್ಲಿಸಿದ ರಿಟ್ ಅರ್ಜಿ ಸಂಖ್ಯೆ 200464-2026 ರ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್. ವಿಶ್ವಜೀತ್ ಶೆಟ್ಟಿ ಅವರು ಮಾ. 5 ರಂದು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಭ್ರಷ್ಟಾಚಾರದ ದೂರಿನ ಸಂಬಂಧ ಒಂದು ತಿಂಗಳೊಳಗೆ ಕಾನೂನು ರೀತ್ಯ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ದೀಪಕ್ ಪಾಟೀಲ ಚಾಂದೋರಿ ಅವರ ಪರವಾಗಿ ವಕೀಲ ಸಿದ್ರಾಮೇಶ್ವರ ಪಾಟೀಲ ವಾದ ಮಂಡಿಸಿದ್ದರು.
ಔರಾದ್ ಕ್ಷೇತ್ರದ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಟೆಂಡರ್ ಕೊಡಿಸಿದ್ದಕ್ಕೆ ಪ್ರತಿಯಾಗಿ ಔರಾದ್ ಶಾಸಕರು ಸುಂದ್ರಮ್ಮ ಟ್ರೇಡಿಂಗ್ ಕಂಪನಿಯಿಂದ ರೂ. 1 ಕೋಟಿ ಲಂಚ ಪಡೆದಿದ್ದಾರೆ. ಹೀಗಾಗಿ ಪ್ರಕರಣದ ತನಿಖೆ ನಡೆಸಿ ಅದರಲ್ಲಿ ಶಾಮೀಲಾದ ಅಧಿಕಾರಿಗಳು, ಸುಂದ್ರಮ್ಮ ಟ್ರೇಡಿಂಗ್ ಕಂಪನಿ ಹಾಗೂ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೀಪಕ್ ಪಾಟೀಲ ಚಾಂದೋರಿ ಅವರು 10-11-2025 ರಂದು ಲೋಕಾಯುಕ್ತ ಎ.ಡಿ.ಜಿ.ಪಿ. ಹಾಗೂ ಬೀದರ್ ಡಿ.ವೈ.ಎಸ್.ಪಿ.ಗೆ ದೂರು ಸಲ್ಲಿಸಿದ್ದರು.
ದೂರಿನ ಕುರಿತು ಲೋಕಾಯುಕ್ತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ದೀಪಕ್ ಪಾಟೀಲ ಚಾಂದೋರಿ ಅವರು 2026 ಫೆಬ್ರುವರಿ 2 ರಂದು ಕಲಬುರಗಿ ಹೈಕೋರ್ಟ್ ಪೀಠದ ಮೊರೆ ಹೋಗಿದ್ದರು.
ಆದೇಶದಿಂದ ಸಮಾಧಾನ: ಕಲಬುರಗಿ ಹೈಕೋರ್ಟ್ ಪೀಠದ ಆದೇಶದಿಂದ ಸಮಾಧಾನವಾಗಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಗೌರವ ಮತ್ತಷ್ಟು ಹೆಚ್ಚಾಗಿದೆ. ಪ್ರಕರಣದಲ್ಲಿ ಸತ್ಯಕ್ಕೆ ಜಯ ಸಿಗಲಿದೆ ಎಂದು ದೀಪಕ್ ಪಾಟೀಲ ಚಾಂದೋರಿ ಪ್ರತಿಕ್ರಿಯಿಸಿದ್ದಾರೆ.
ಶಾಸಕರು ಅಂಗನವಾಡಿ ಆಹಾರ ಪೂರೈಕೆಯಲ್ಲಿ ಲಂಚ ಪಡೆದಿರುವ ಬಗ್ಗೆ ತಾವು ಮಾಡಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಸುಂದ್ರಮ್ಮ ಟ್ರೇಡಿಂಗ್ ಕಂಪನಿ ತನ್ನ ಖಾತೆಯಿಂದ ಶಾಸಕರ ಮಾಲೀಕತ್ವದ ಮುಂಬೈನ ಪ್ರಭು ಎಂಟರ್‍ಪ್ರೈಸೆಸ್ ಖಾತೆಗೆ ರೂ. 1 ಕೋಟಿ ಲಂಚದ ಹಣ ಜಮಾ ಮಾಡಿದೆ. ಖಾತೆ ಪರಿಶೀಲಿಸಿದರೆ ಭ್ರಷ್ಟಾಚಾರ ಬಯಲಾಗಲಿದೆ ಎಂದು ಹೇಳಿದ್ದಾರೆ.
ಮೊದಲು ಅಂಗನವಾಡಿ ಆಹಾರ ಪೂರೈಕೆ ಗುತ್ತಿಗೆಗೆ ಟೆಂಡರ್ ಇರಲಿಲ್ಲ. ಶಾಸಕರು ಶಿಫಾರಸು ಮಾಡಿದವರಿಗೆ ಸರಬರಾಜು ಆದೇಶ ಕೊಡಲಾಗುತ್ತಿತ್ತು. ಶಾಸಕರು 2018 ರಿಂದ 2023 ರ ವರೆಗೆ ಹಾಗೆಯೇ ತಮ್ಮ ಆಪ್ತರ ಸುಂದ್ರಮ್ಮ ಟ್ರೇಡಿಂಗ್ ಕಂಪನಿಗೆ ಸರಬರಾಜು ಆದೇಶ ಕೊಡಿಸಿದ್ದರು. ಅದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ಕಂಪನಿಗೆ ಹಣ ನಿಗದಿಪಡಿಸಿ, ನಗದು ರೂಪದಲ್ಲಿ ಪಡೆದಿದ್ದರು. ಅನಂತರ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ಸುಂದ್ರಮ್ಮ ಟ್ರೇಡಿಂಗ್ ಕಂಪನಿ ವಾರ್ಷಿಕ ರೂ. 6 ಕೋಟಿ ಮೌಲ್ಯದ ಪೌಷ್ಟಿಕ ಆಹಾರ ಪೂರೈಸುತ್ತಿದೆ. ಕಂಪನಿ ಹಾಗೂ ಶಾಸಕರ ಮಧ್ಯದ ಒಪ್ಪಂದ ಹಾಗೂ ಭ್ರಷ್ಟಾಚಾರದಿಂದಾಗಿ ಔರಾದ್ ಕ್ಷೇತ್ರದ ಅಂಗನವಾಡಿ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ದೊರೆಯುತ್ತಿದೆ. ಮುಗ್ಧ ಮಕ್ಕಳ ಆಹಾರದಲ್ಲೂ ಭ್ರಷ್ಟಾಚಾರ ಎಸಗಿರುವವರಿಗೆ ಮಕ್ಕಳ ಶಾಪ ತಟ್ಟಲಿದೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗುವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.