ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು, ಜ.೨೩: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮೋಟಾರು ವಾಹನ ಕಾಯ್ದೆಯಲ್ಲಿ ಬೈಕ್ ಅನ್ನು ಸಾರಿಗೆ ವಾಹನ ಎಂದು ಪರಿಗಣಿಸದಿರುವ ಕಾರಣ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾದ ಮಂಡಿಸಿತ್ತು. ಆದರೀಗ ಹೈಕೋರ್ಟ್ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಹಸಿರು ನಿಶಾನೆ ತೋರಿದೆ.


ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಈ ತೀರ್ಪಿನಿಂದಾಗಿ ಬೈಕ್ ಟ್ಯಾಕ್ಸಿ ಚಾಲಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಲ್ಲಿಸುವಂತೆ ಆದೇಶವನ್ನು ಹೊರಡಿಸಿತ್ತು, ಈ ಆದೇಶದ ವಿರುದ್ದ ಒಲಾ, ಊಬರ್ ಮತ್ತಿತರ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಗಳು ಜೂನ್ ತಿಂಗಳಲ್ಲಿ ಮೇಲ್ಮನವಿ ಸಲ್ಲಿಸಿದ್ದವು.


ಇದೇ ವೇಳೆ ಮೇಲ್ಮನವಿ ಅರ್ಜಿ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾ. ಸಿ.ಎಂ ಜೋಶಿ ಅವರ ವಿಭಾಗೀಯ ನ್ಯಾಯಪೀಠದ ಮುಂದೆ ಸುದೀರ್ಘವಾಗಿ ವಾದವನ್ನು ಆಲಿಸಿ ಶುಕ್ರವಾರ (ಜ.೨೩) ಮೇಲ್ಮನವಿಯ ಬಗ್ಗೆ ಆದೇಶ ನೀಡುವುದಾಗಿ ತಿಳಿಸಿತ್ತು. ತೀರ್ಪಿನ ಅನ್ವಯ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಪುನರಾರಂಭವಾಗಲಿವೆ.


ಬೈಕ್ ಮಾಲೀಕರು ಅಥವಾ ಅಗ್ರಿಗೇಟರ್‌ಗಳು ಸಾರಿಗೆ ವಾಹನಗಳಾಗಿ ಬಳಸಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಅರ್ಹ ಮನವಿಗಳನ್ನು ಸರ್ಕಾರ ಪುರಸ್ಕರಿಸಿ ಅನುಮತಿ ನೀಡಬೇಕು. ಮೋಟಾರು ವಾಹನ ಕಾಯ್ದೆಯ ಕಲಂ ೭೪ (೨)ರ ಪ್ರಕಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಅಗತ್ಯ ಷರತ್ತುಗಳನ್ನು ವಿಧಿಸಬಹುದು ಎಂದು ನ್ಯಾಯಪೀಠ ಆದೇಶ ನೀಡಿದೆ.


ರಾಜ್ಯದಲ್ಲಿ ಬೈಕ್ ಟ್ಯಾಕ್ಷಿ ಅವಳಿ ಹೆಚ್ಚಾಗಿದೆ ಎಂದು ಕೆಲ ಸಂಸ್ಥೆಗಳು ದೂರು ನೀಡಿತ್ತು. ಆಟೋ, ಕ್ಯಾಬ್, ಸೇವೆಗಳು ದುಬಾರಿಯಾಗುತ್ತಿದಂತೆ ಬೈಕ್ ಟ್ಯಾಕ್ಸ್ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳ ಪ್ರಯಾಣಿಕರಿಗೆ ವರದಾನವಾಗಿತ್ತು. ಆದರೆ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನಿಷೇಧಿಸಿ ಆದೇಶ ನೀಡಿತ್ತು.
ಈ ಆದೇಶ ಪ್ರಶ್ನಿಸಿ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಹೀಗಾಗಿಅಗ್ರಿಗೇಟರ್ ಕಂಪನಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಅನುಮತಿ ನೀಡಿದೆ.

ಆದೇಶ ಪತ್ರ ಸಿಕ್ಕಿಲ್ಲ: ರಾಮಲಿಂಗಾರೆಡ್ಡಿ


ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಹೈಕೋರ್ಟ್ ಅನುಮತಿ ನೀಡಿರುವ ಆದೇಶ ಪ್ರತಿ ಸಿಕ್ಕಿಲ್ಲ. ಆದೇಶ ಪ್ರತಿ ಬಂದ ನಂತರ ಕೂಲಂಕುಶವಾಗಿ ಪರಿಶೀಲಿಸುವುದಾಗಿ ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸಾರಿಗೆ ಇಲಾಖೆಯ ಆಯುಕ್ತರೊಂದಿಗೆ ಚರ್ಚೆ ನಡೆಸಿ, ಕಾನೂನು ಹೋರಾಟ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.