ಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನವೇ ಅಂತಿಮ: ಕೆಎನ್‌ಆರ್

ತುಮಕೂರು, ಅ. ೨೯- ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂಬುದು ನಮ್ಮ ಆಸೆ, ಅದರಲ್ಲಿ ತಪ್ಪೇನಿದೆ. ಆಸೆ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ. ಎನ್. ರಾಜಣ್ಣ ಹೇಳಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದಲ್ಲಿ ಯಾವತ್ತೂ ಕೂಡ ತೀರ್ಮಾನ ಮಾಡುವುದು ಹೈಕಮಾಂಡ್ ಆಗಿರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿ ತೀರ್ಮಾನ ಆಗಲಿದೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಅದು ಕಾಂಗ್ರೆಸ್ ಅಥವಾ ಬಿಜೆಪಿ ಇರಬಹುದು. ಹೈಕಮಾಂಡ್‌ನದ್ದೇ ಅಂತಿಮ ತೀರ್ಮಾನ. ಮುಖ್ಯಮಂತ್ರಿ ಮುಂದು ವರೆಯಬೇಕೆಂಬುದು ನಮ್ಮ ಆಸೆ, ಅದರಲ್ಲಿ ತಪ್ಪೇನಿದೆ. ಆಸೆ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಅದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇರಬಹುದು, ಎಲ್ಲವೂ ಅಷ್ಟೇ ಎಂದರು.


ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ನವೆಂಬರ್ ೧೪ರ ವರೆಗೂ ಏನೂ ನಡೆಯುವುದಿಲ್ಲ. ಈಗ ನಡೆಯುತ್ತಿರುವ ನಾಯಕತ್ವ ಬದಲಾವಣೆ ವಿಷಯವೆಲ್ಲವೂ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಆಗಿದೆ ಎಂದು ಹೇಳಿದರು.


ದಲಿತರು ಮುಖ್ಯಮಂತ್ರಿ ಆಗಿಲ್ಲ ಎನ್ನುವ ಕೂಗು ಮೊದಲಿನಿಂದಲೂ ಇದೆ. ಕಾಂಗ್ರೆಸ್ ಪಕ್ಷ ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದೆ. ಹಾಗೆಂದು ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಲು ಬರುವುದಿಲ್ಲ ಎಂದರು.


ಈ ಹಿಂದೆ ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳು ಆಗಬೇಕೆಂದು ನಾನೇ ಹೇಳಿದ್ದೆ. ಇದರಿಂದ ಕಳೆದ ಲೋಕಸಭೆಯಲ್ಲಿ ಅನುಕೂಲವಾಗುತ್ತಿತ್ತು. ಹಾಗಾಗಿ ನಾನು ವಾದ ಮಾಡಿದ್ದೆ. ಈಗಲೂ ಅಲ್ಪಸಂಖ್ಯಾತರನ್ನು ಸೇರಿ ಉಪಮುಖ್ಯಮಂತ್ರಿಗಳನ್ನು ಮಾಡಿದರೆ ಒಳ್ಳೆಯದು ಎಂದರು.


ರಾಜಕಾರಣದಲ್ಲಿ ಹೇಳುವುದು ಮತ್ತು ಮಾಡುವುದರಲ್ಲಿ ಬಹಳ ವ್ಯತ್ಯಾಸವಿದೆ. ಹಿಂದೆ ನಾನು ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಹಾಗೆಂದು ಮುಂದೆ ಸ್ಪರ್ಧಿಸುವುದಿಲ್ಲ ಎಂದು ಯಾವ ಗ್ಯಾರಂಟಿ. ಹಾಗೆಯೇ ಸಿದ್ದರಾಮಯ್ಯ ಅವರಿಗೆ ಒತ್ತಡ ಇದೆ. ಸಿಎಂ ಯಾರು ಆಗಬೇಕು ಎನ್ನುವುದು ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಷಯ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂಬ ಆಶಯವು ಇದೆ ಎಂದು ಅವರು ಪುನರುಚ್ಚರಿಸಿದರು.


ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಇದೇ ರೀತಿ ಪರಿಸ್ಥಿತಿ ಇತ್ತು. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಂತೆಯೇ ಆಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರು ಇದ್ದಾರೆ. ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ಸ್ಥಾನ ಬೇಡ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ಇತಿಹಾಸ ಎಂದು ತಿಳಿಸಿದರು.


ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಮುಂದೊಂದು ದಿನ ನಾನು ಸೇರಿದಂತೆ ಅವರು, ಪ್ರಧಾನಿ ಆಗಬೇಕೆಂಬ ಅಭಿಲಾಷೆ ಹೊಂದಿದವರಾಗಿದ್ದೇವೆ ಎಂದು ಹೇಳಿದರು.


ಒಬಿಸಿಗೂ ಮೀಸಲಾತಿ ಕೊಡಬೇಕು
ಸ್ಥಳೀಯ ಸಂಸ್ಥೆಗಳಲ್ಲಿರುವಂತೆ ವಿಧಾನಸಭೆ ಮತ್ತು ಲೋಕಸಭೆಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ಕ್ಷೇತ್ರ ಕೊಡಬೇಕು. ಮಹಿಳಾ ಮೀಸಲಾತಿ ತರುವ ಚಂತನೆಯಂತೆ ಹಿಂದುಳಿದ ವರ್ಗಕ್ಕೂ ಮೀಸಲಾತಿ ಕೊಡಬೇಕು. ಕೇಂದ್ರ ಸರ್ಕಾರ ಇದನ್ನು ಮಾಡಬೇಕು ಎಂದು ಆಗ್ರಹಿಸಿದರು.


ಅಮೆರಿಕಾದಲ್ಲಿರುವಂತೆ ಇಲ್ಲೂ ಅಧಿಕಾರ ಸೀಮಿತಗೊಳಿಸಬೇಕು. ಅಮೆರಿಕಾದಲ್ಲಿ ಎರಡು ಬಾರಿ ಮಾತ್ರ ಅಧ್ಯಕ್ಷರಾಗಿ ಆಯ್ಕೆಯಾಗಲು ಅವಕಾಶವಿದೆ. ಹಾಗೆಯೇ ನಮ್ಮ ದೇಶದಲ್ಲೂ ಕಾನೂನು ಜಾರಿಯಾಗಬೇಕು ಎಂದು ಸಲಹೆ ನೀಡಿದರು.


ಸರ್ಕಾರಿ ಸ್ಥಳಗಳಲ್ಲಿ ಆರ್‌ಆರ್‌ಎಸ್ ಚಟುವಟಿಕೆ ನಿರ್ಬಂಧ ಕುರಿತ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್‌ನಲ್ಲಿ ತೀರ್ಮಾನ ಆದ ಮೇಲೆ ಪ್ರಶ್ನೆ ಮಾಡುವ ಹಕ್ಕು ಇಲ್ಲ. ಸಾರ್ವಜನಿಕವಾಗಿ ಟೀಕೆ ಮಾಡಲು ಸಾಧ್ಯವಿಲ್ಲ. ಸರ್ಕಾರ ಈ ಸಂಬಂಧ ಹೈಯರ್ ಕೋರ್ಟ್‌ನಲ್ಲಿ ಅಫೀಲು ಸಲ್ಲಿಸಬಹುದು. ರಾಜ್ಯ ಸರ್ಕಾರದ ತೀರ್ಮಾನಗಳಿಗೂ ಕೆಲವೊಂದು ಬಾರಿ ಈ ರೀತಿ ಆಗಲಿದೆ. ಹಾಗಂತ ಇದು ಸರ್ಕಾರಕ್ಕೆ ಹಿನ್ನಡೆ ಅಂತ ಅಲ್ಲ ಎಂದು ತಿಳಿಸಿದರು.