
ರಾಹುಲ್ ಗಾಂಧಿ ಎಲ್ಲವನ್ನು ತೀರ್ಮಾನಿಸುತ್ತಾರೆ ಅದಕ್ಕೆ ಬದ್ಧ: ಸಿದ್ದು ಪುನರುಚ್ಚಾರ
ಬೆಂಗಳೂರು, ಡಿ. ೨೨- ರಾಜ್ಯ ಕಾಂಗ್ರೆಸ್‌ನ ನಾಯಕತ್ವ ಬದಲಾವಣೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ನಾಯಕತ್ವ ಗೊಂದಲದ ವಿಚಾರದಲ್ಲಿ ಕೈ ಹೈಕಮಾಂಡ್ ಕೈ ಹಾಕಲ್ಲ. ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿದ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕಮಾಂಡೇ ನಾಯಕತ್ವ ಗೊಂದಲವನ್ನು ಬಗೆಹರಿಸುತ್ತದೆ. ರಾಹುಲ್‌ಗಾಂಧಿಯವರೇ ಎಲ್ಲವನ್ನು ತೀರ್ಮಾನಿಸುತ್ತಾರೆ ಎಂದು ಹೇಳುವ ಮೂಲಕ ಹೈಕಮಾಂಡೇ ಎಲ್ಲವನ್ನು ಬಗೆಹರಿಸಬೇಕು ಎಂಬ ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂಬ ಸಂದೇಶ ನೀಡಿದ್ದಾರೆ.
ಮೈಸೂರಿನಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಯಕತ್ವ ಬದಲಾವಣೆ ವಿಚಾರವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್‌ಗಾಂಧಿಯವರೇ ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ ಎಂದು ಹೇಳುವ ಮೂಲಕ ಕುರ್ಚಿ ಕಿತ್ತಾಟದ ಚೆಂಡನ್ನು ಮತ್ತೆ ಹೈಕಮಾಂಡ್ ಅಂಗಳಕ್ಕೆ ರವಾನಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನ ಗೊಂದಲ, ನಾಯಕತ್ವ ಬದಲಾವಣೆ ಈ ಎಲ್ಲದರ ಬಗ್ಗೆ ನಾನು ಪಕ್ಷದ ವರಿಷ್ಠರ ಜತೆ ಮಾತನಾಡಿದ್ದೇನೆ. ವರಿಷ್ಠರು ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾವು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.
ನಾಯಕತ್ವ ಬದಲಾವಣೆ ವಿಚಾರವನ್ನು ಸ್ಥಳೀಯರೇ ಬಗೆಹರಿಸಿಕೊಳ್ಳಲಿ, ಹೈಕಮಾಂಡ್ ಮಧ್ಯೆ ಪ್ರವೇಶಿಸಲ್ಲ ಎಂಬ ಎಐಸಿಸಿ ಅಧ್ಯಕ್ಷ ಖರ್ಗೆಯವರು ಹೇಳಿಕೆ ನೀಡಿದ ನಂತರವೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲವನ್ನೂ ಹೈಕಮಾಂಡೇ ಬಗೆಹರಿಸಬೇಕು. ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧ. ನನ್ನ ನಿಲುವಿನಲ್ಲಿ ಯಾವ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ನಾಯಕತ್ವ ಬದಲಾವಣೆ ಮಾಧ್ಯಮಗಳ ಸೃಷ್ಟಿ. ಮಾಧ್ಯಮದವರೇ ಹೆಚ್ಚಾಗಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ನಾನು ವಿಧಾನಸಭೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಹೈಕಮಾಂಡ್ ಎಲ್ಲವನ್ನು ತೀರ್ಮಾನಿಸುತ್ತದೆ ಎಂದು ಹೇಳಿದ್ದರೂ ಮೇಲಿಂದ ಮೇಲೆ ಪುನಃ ಪುನಃ ಈ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ಈ ಹೇಳಿಕೆ ಹಾಗೂ ಅವರ ನಿಲುವು ರಾಜ್ಯ ಕಾಂಗ್ರೆಸ್‌ನ ಗೊಂದಲಗಳಿಗೆ ಮತ್ತಷ್ಟು ಇಂಬು ನೀಡಿದೆ. ಈ ಗೊಂದಲಗಳನ್ನು ಯಾರು ಪರಿಹರಿಸುತ್ತಾರೆ, ಸ್ಥಳೀಯ ನಾಯಕರೇ ಕುಳಿತು ಬಗೆಹರಿಸಿಕೊಳ್ಳುತ್ತಾರಾ, ಇಲ್ಲವೇ ಹೈಕಮಾಂಡ್ ಮುಖ್ಯಮಂತ್ರಿಗಳ ಮಾತಿನಂತೆ ತೀರ್ಮಾನ ಮಾಡುತ್ತದಾ ಎಂಬುದು ಕುತೂಹಲ ಮೂಡಿಸಿದೆ.
ಸಂಕ್ರಾಂತಿಗೆ ಕ್ರಾಂತಿಯಾಗುತ್ತದೆ ಎಂಬ ಮಾತುಗಳಿಗೂ ಪ್ರತಿಕ್ರಿಯಿಸಿದ ಅವರು, ಯಾವ ಕ್ರಾಂತಿಯೂ ಇಲ್ಲ, ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಮಾಜಿ ಸಚಿವ ರಾಜಣ್ಣ ಅವರು ನಿನ್ನೆ ರಾತ್ರಿ ಮತ್ತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭೇಟಿ ಮಾಡಲಿ ತಪ್ಪೇನಿದೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ಅವರನ್ನು ಭೇಟಿ ಮಾಡುವುದು ತಪ್ಪೇನಿಲ್ಲ ಎಂದು ರಾಜಣ್ಣ ಮತ್ತು ಡಿ.ಕೆ. ಶಿವಕುಮಾರ್ ಭೇಟಿಯನ್ನು ಸಮರ್ಥಿಸಿಕೊಂಡರು.
ಮಾಜಿ ಸಚಿವ ಕೆ.ಎನ್. ರಾಜಣ್ಣನವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ನಾನೇ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿದ್ದಾಗ ನಾನು ಮಾಡಿದೆ, ಅವರು ಮಾಡಿದರು ಎಂಬುದು ಮುಖ್ಯವಲ್ಲ, ಅದರ ಪ್ರಶ್ನೆಯೇ ಇಲ್ಲ. ಆಗ ಎಸ್.ಎಂ. ಕೃಷ್ಣರವರು ಮುಖ್ಯಮಂತ್ರಿಗಳಾಗಿದ್ದರು. ಆಗ ಸರ್ಕಾರ ಮಾಡಿತ್ತು ಎಂದರು.
ಬಜೆಟ್ ಸಿದ್ಧತೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಜೆಟ್ ತಯಾರಿ ನಡೆಸುವಾಗ ತಿಳಿಸುತ್ತೇನೆ ಎಂದು ಚುಟುಕಾಗಿ ಹೇಳಿದರು.


























