ಹೇಮಾವತಿ ನಾಲಾ ಕಾಮಗಾರಿ ಭೂಸ್ವಾಧೀನ ರೈತರಿಗೆ ೪.೯೦ ಕೋಟಿ ಪರಿಹಾರ ಮಂಜೂರು: ಸಿಬಿಎಸ್

ಚಿಕ್ಕನಾಯಕನಹಳ್ಳಿ, ಜ. ೨- ತಾಲ್ಲೂಕಿನಲ್ಲಿ ನಡೆಯುತ್ತಿರುವ ಹೇಮಾವತಿ ನಾಲಾ ಯೋಜನೆಗೆ ಜಮೀನುಗಳನ್ನು ಬಿಟ್ಟು ಕೊಟ್ಟು ಸರ್ಕಾರದಿಂದ ಅವಾರ್ಡ್ ಪತ್ರ ಪಡೆದಿರುವ ರೈತರುಗಳಿಗೆ ವಿತರಿಸಲು ೪ ಕೋಟಿ ೯೦ ಲಕ್ಷ ರೂ. ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿರುವುದಾಗಿ ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.


ಪಟ್ಟಣದ ದಬ್ಬೇಘಟ್ಟ ಕೆಂಪಮ್ಮ ದೇವಿ ದೇವಾಲಯದ ಬಳಿ ನಡೆದ ರೈತರ, ಹೋರಾಟಗಾರರ ಹಾಗೂ ರೈತ ಸಂಘಟನೆಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಅಗಸರಹಳ್ಳಿಯಿಂದ ದಬ್ಬೇಘಟ್ಟ ಮಾರ್ಗವಾಗಿ ಚಿಕ್ಕನಾಯಕನಹಳ್ಳಿ ಕೆರೆಗೆ ಹಾಗೂ ನವಿಲೆಕೆರೆಗೆ ನೀರು ಹರಿಸುವ ಸಂಬಂಧ ಕೈಗೆತ್ತಿಗೊಳ್ಳಲಾಗಿರುವ ನಾಲಾ ಕಾಮಗಾರಿಗೆ ಈಗಾಗಲೇ ಜಮೀನುಗಳನ್ನು ಬಿಟ್ಟು ಕೊಟ್ಟು, ದಾಖಲೆಗಳು ಸರಿ ಇದ್ದು ಈಗಾಗಲೇ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಕಾಗದ ಪತ್ರಗಳನ್ನು ಸಲ್ಲಿಸಿರುವ ೧೭ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಉಳಿದವರು ಭೂಸ್ವಾಧೀನ ಪ್ರಕ್ರಿಯೆಗೆ ಆದಷ್ಟು ಬೇಗ ದಾಖಲೆಗಳನ್ನು ನೀಡಿದರೆ ಹಣ ವರ್ಗಾಯಿಸಲಾಗುವುದು. ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಕುಟುಂಬ ವ್ಯಾಜ್ಯಗಳು ನ್ಯಾಯಾಲಯದ ಮೆಟ್ಟಿಲು ಹತ್ತಿರುವ ಪ್ರಕರಣಗಳ ಜಮೀನುಗಳಿಗೆ ಸಂಬಂಧಿಸಿದಂತಹವರಿಗೆ ಹಣ ನೀಡಲು ನ್ಯಾಯಾಲಯದಲ್ಲಿ ಸೂಕ್ತ ಠೇವಣಿಯನ್ನು ಇಟ್ಟು ಕೆಲಸವನ್ನು ಮುಂದುವರೆಸುವುದಾಗಿ ಹೇಳಿದರು.


ನಾವೇನಾದರೂ ಸಂಬಂಧಿಸಿದ ರೈತರಿಗೆ ಹಣ ನೀಡದೆ ಇಲಾಖೆಯಲ್ಲೇ ಇಟ್ಟುಕೊಂಡರೆ ಮುಂದಿನ ಮಾರ್ಚ್ ನಂತರ ಆ ಹಣವೆಲ್ಲಾ ಸರ್ಕಾರದ ಖಜಾನೆಗೆ ವಾಪಸ್ ಹೋಗುವುದು ನಂತರ ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ. ಅದ್ದರಿಂದ ಮುಂದಿನ ವರ್ಷದೊಳಗಾದರೂ ನಾವು ತಾಲ್ಲೂಕಿಗೆ ಹರಿಯಬೇಕಾದ ನೀರಿನ ಪೂರ್ಣ ಪ್ರಮಾಣವನ್ನು ಹರಿಸಲೇಬೇಕು. ಈ ವರ್ಷವೇ ನಾವು ನೀರು ಹರಿಸಿಕೊಳ್ಳಲು ಮುಂದಾಗಬಹುದಿತ್ತು, ಆದರೆ ಜಮೀನು ಬಿಟ್ಟುಕೊಡುವ ರೈತರಿಗೆ ಹಣ ನೀಡದೇ ಜಮೀನುಗಳಲ್ಲಿ ಕೆಲಸ ಮುಂದುವರೆಸಬಾರದೆಂಬ ಮಾನವೀಯತೆಯ ಸಲುವಾಗಿ ಕಾಮಗಾರಿ ಸ್ವಲ್ಪ ತಡವಾಯಿತು, ಆದರೆ ಇನ್ನು ಮುಂದೆ ಈ ರೀತಿ ಯೋಚಿಸಲು ಸಾಧ್ಯವಿಲ್ಲ. ಕಾಮಾಗಾರಿಯನ್ನು ಮುಂದುವರೆಸುತ್ತೇವೆ ಎಂದರು.


ಸರ್ಕಾರದಿಂದ ಹಣ ಖಾತೆಗೆ ಬಾರದ ಕೆಲವು ರೈತರು ಶಾಸಕರ ಬಳಿ ತಮಗಾದ ನೋವುಗಳನ್ನು ಹೇಳಿಕೊಂಡು, ನಮ್ಮ ಜಮೀನುಗಳನ್ನು ಬಿಟ್ಟುಕೊಡುತ್ತೇವೆ ಆದರೆ ಸಂಬಂಧಿಸಿದ ಅಧಿಕಾರಿಗಳು ನಮಗೆ ಒಂದು ಮಾತು ಹೇಳಿದೇ ಏಕಾಏಕಿ ಯಂತ್ರಗಳನ್ನು ತಂದು ಕೆಲಸ ಮಾಡಿಸುತ್ತಾರೆ. ಅಧಿಕಾರಿಗಳ ಈ ನಡೆ ನಮಗೆ ಆತಂಕವನ್ನುಂಟು ಮಾಡಿದೆ ಎಂದರು. ಇದಕ್ಕೆ ಪ್ರತಿಕ್ರಯಿಸಿದ ಶಾಸಕರು ಸಭೆಯಲ್ಲಿದ್ದ ಹೇಮಾವತಿ ನಾಲಾ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಉದ್ದೇಶಿಸಿ ನೀವು ಆ ರೀತಿ ಮಾಡಬೇಡಿ ಸಂಬಂಧಿಸಿದ ರೈತರುಗಳಿಗೆ ವಿಷಯ ತಿಳಿಸಿ ಕಾಮಗಾರಿಗಳನ್ನು ಮಾಡಿ ಎಂದು ಸೂಚಿಸಿದರು.


ಸಭೆಯಲ್ಲಿ ಹೇಮಾವತಿ ಇಂಜಿನಿಯರ್ ಸೌಜನ್ಯ, ಭೂಸ್ವಾಧೀನಾಧಿಕಾರಿಗಳ ಕಚೇರಿಯ ಆರ್.ಐ. ಕೆಂಪರಾಜು, ಕಸಬಾ ಆರ್.ಐ. ಅಶೋಕ್ ಸೇರಿದಂತೆ ರೈತ ಸಂಘಟನೆಗಳ ಶ್ಯಾವಿಗೆಹಳ್ಳಿ ಮಧು, ಆಟೋ ಮಂಜುನಾಥ್, ಯಧುಕುಮಾರ್, ಕೊಡಲಾಗರದ ಲೋಕೇಶ್, ದಬ್ಬೇಘಟ್ಟ ಪ್ರಕಾಶ್ ಸೇರಿದಂತೆ ಹಲವು ರೈತರುಗಳು, ರೈತ ಮುಖಂಡರುಗಳು ಉಪಸ್ಥಿತರಿದ್ದರು.