
ಬೆಂಗಳೂರು, ಜೂ.೧- ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿಸಿ ತುಮಕೂರಿನಲ್ಲಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಕುಣಿಗಲ್ ಜನರ ನ್ಯಾಯಯುತ ಪಾಲಿನ ನೀರಿಗೆ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಅನಿವಾರ್ಯ, ಇದಕ್ಕಾಗಿ ಹೋರಾಟಕ್ಕೆ ಸಿದ್ಧ ಎಂದು ಕುಣಿಗಲ್‌ನ ಕಾಂಗ್ರೆಸ್‌ನ ಶಾಸಕ ಡಾ. ಎಚ್.ಡಿ ರಂಗನಾಥ್ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ವೈ.ಕೆ ರಾಮಯ್ಯ ಅವರ ಹೋರಾಟದ ಫಲವಾಗಿ ಹೇಮಾವತಿ ನೀರಿನ ಶೇ. ೪೯ ರಷ್ಟು ಪಾಲನ್ನು ಪಡೆಯುತ್ತಿದೆ. ಹೇಮಾವತಿ ಹೋರಾಟದ ತವರು ಕುಣಿಗಲ್ ತಾಲ್ಲೂಕು, ಕಾವೇರಿ ಜಲಾಯನ ಪ್ರದೇಶಕ್ಕೆ ಒಳಪಟ್ಟ ಮೂಲ ಫಲಾನುಭವಿಗಳಾಗಿದ್ದರೂ ತಾಲ್ಲೂಕು ತನ್ನ ಪಾಲಿನ ನೀರನ್ನು ಪಡೆಯಲು ಸಾಧ್ಯವಾಗಿಲ್ಲ. ಕಳೆದ ೧೦ ವರ್ಷಗಳಲ್ಲಿ ನಮಗೆ ಹರಿದಿರುವುದು ಕೇವಲ ೩೦೦ ರಿಂದ ೫೦೦ ಎಂಸಿಎಫ್ ನೀರು ಮಾತ್ರ. ಶೇ. ೯೦ರಷ್ಟು ನೀರು ನಮಗೆ ಬಂದಿಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಕುಣಿಗಲ್‌ಗೆ ಆಗಿರುವ ಈ ಅನ್ಯಾಯ ಸರಿಪಡಿಸಿ ತನ್ನ ಪಾಲಿನ ನೀರನ್ನು ಹರಿಸಲು ೨೦೧೮ ರಲ್ಲಿ ಈ ಲಿಂಕ್ ಕೆನಾಲ್ ಕಾಮಗಾರಿಯನ್ನು ಕೈಗೆತ್ತಿಕ್ಕೊಳಲಾಯಿತು. ಹಲವು ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಎಲ್ಲ ಅಡೆತಡೆಗಳನ್ನು ಮೀರಿ ಕಾಮಗಾರಿ ಪ್ರಾರಂಭವಾಗಿ ಕುಣಿಗಲ್ ಜನತೆಯ ದಶಕಗಳ ಕನಸು ನನಸಾಗುವ ಹೊತ್ತಿನಲ್ಲಿ ಈ ಯೋಜನೆ ವಿರೋಧಿಸಿ ಹೋರಾಟ ನಡೆಯುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.
ಕುಣಿಗಲ್ ತಾಲ್ಲೂಕಿನ ಜನ ತನ್ನ ಪಾಲಿನ ನೀರು ಸಿಗದೇ ಇದ್ದರೂ ಕಾವೇರಿ ಜಲಾಯನ ಪ್ರದೇಶಕ್ಕೆ ಒಳಪಡದೆ ಇರುವ ತುಮಕೂರು ಜಿಲ್ಲೆಯ ಕೆಲ ತಾಲ್ಲೂಕುಗಳ ಭಾಗಗಳಿಗೆ ಕುಡಿಯುವ ನೀರಿಗಾಗಿ ಹೇಮಾವತಿ ನೀರನ್ನು ಹಂಚಿಕೆ ಮಾಡಿದಾಗಲೂ ಯಾವುದೇ ವಿರೋಧ ವ್ಯಕ್ತಪಡಿಸದೆ ಔದಾರ್ಯತೆ ತೋರಿ ಸೌಹಾರ್ದತೆ ಮೆರೆದಿದ್ದರು. ಆದರೆ, ಇಂದು ತಮ್ಮ ಪಾಲಿನ ನೀರನ್ನು ಪಡೆಯಲು ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿರುವುದು ಅತೀವ ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಲಿಂಕ್ ಕೆನಾಲ್ ಪೈಪ್‌ಲೇನ್ ಕಾಮಗಾರಿಯನ್ನು ಕೇವಲ ಕುಣಿಗಲ್ ತಾಲ್ಲೂಕಿನ ಹಂಚಿಕೆಯಾಗಿರುವ ೩೮೮ ಕ್ಯೂಸೆಕ್ ನೀರು ಮಾತ್ರ ಹರಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಇದರಿಂದ ಜಿಲ್ಲೆಯ ಇತರೆ ತಾಲ್ಲೂಕಿನ ಪಾಲಿಗೆ ನೀರಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಈ ಬಗ್ಗೆ ತಜ್ಞರ ಸಮಿತಿ ಸಹ ಅಭಿಪ್ರಾಯ ನೀಡಿದೆ.
ಆದರೂ ಕೆಲ ಪಟ್ಟಭದ್ರದು ರಾಜಕೀಯ ಸ್ವಾರ್ಥಕ್ಕಾಗಿ ಈ ಯೋಜನೆಯ ವಿರುದ್ಧ ಅಪಪ್ರಚಾರ ಮಾಡುತ್ತ ಧ್ವೇಷದ ಬೀಜ ಬಿತ್ತಲು ಮುಂದಾಗಿದ್ದಾರೆ. ಜಿಲ್ಲೆಯ ಜನತೆ ರೈತ ಬಾಂಧವರು ಈ ಅಪಪ್ರಚಾರಕ್ಕೆ ಕಿವಿಗೊಡದೆ ಕಾಮಗಾರಿಗೆ ಅಡ್ಡಿಪಡಿಸದೆ ಸಹಕರಿಸಬೇಕು ಎಂದು ಶಾಸಕ ಎಚ್‌ಡಿ ರಂಗನಾಥ್ ಮನವಿ ಮಾಡಿದ್ದಾರೆ.
ಒಂದು ವೇಳೆ ಈ ಯೋಜನೆಯ ಜಾರಿಗೆ ಸಹಕಾರ ಸಿಗದಿದ್ದರೆ ಜಿಲ್ಲೆಯ ಮಗನಾಗಿ ಕುಣಿಗಲ್ ತಾಲ್ಲೂಕಿನ ಜನತೆ ಪರವಾಗಿ ಉಗ್ರ ಹೋರಾಟ ಮಾಡಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.