Home ಜಿಲ್ಲೆ ಹೇಮಗಿರಿಮಠ ಅವರ ದಕ್ಷ ಸೇವೆ ಗೌರವಕ್ಕೆ ಪಾತ್ರ: ಗುಲಾಬಚಂದ ಜಾಧವ

ಹೇಮಗಿರಿಮಠ ಅವರ ದಕ್ಷ ಸೇವೆ ಗೌರವಕ್ಕೆ ಪಾತ್ರ: ಗುಲಾಬಚಂದ ಜಾಧವ

ವಿಜಯಪುರ, ಅ. 8: ಸರಳತೆ, ಶಿಸ್ತು, ಸೌಜನ್ಯ ಹಾಗೂ ಕರ್ತವ್ಯನಿಷ್ಠೆಯಿಂದ ಮೂರು ದಶಕಗಳ ಕಾಲ ಶೈಕ್ಷಣಿಕ ಸೇವೆ ಸಲ್ಲಿಸಿರುವ ವಿಶ್ರಾಂತ ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ ಅವರ ಸೇವೆ ಸಮಾಜದ ಗೌರವಕ್ಕೆ ಪಾತ್ರವಾಗಿದೆ ಎಂದು ಜಿಲ್ಲಾ ಮಾಧ್ಯಮ ಪ್ರಶಸ್ತಿ ಪುರಸ್ಕøತ ಗುಲಾಬಚಂದ ಜಾಧವ ಹೇಳಿದರು.
ಆಲಮಟ್ಟಿಯ ಎಂಎಚ್‍ಎಂ ಪಪೂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ವಯೋಸೇವಾ ನಿವೃತ್ತಿ ಹೊಂದಿದ ಹೇಮಗಿರಿಮಠ ಅವರ ನಿವಾಸಕ್ಕೆ ತೆರಳಿದ ಗುಲಾಬಚಂದ ಜಾಧವ ಹಾಗೂ ಸುನೀತಾ ಜಾಧವ ದಂಪತಿ, ಹೇಮಗಿರಿಮಠ ಹಾಗೂ ಅವರ ಪತ್ನಿ ಶ್ವೇತಾ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಹೇಮಗಿರಿಮಠ ಅವರು ಶೈಕ್ಷಣಿಕ ಸೇವೆಯೊಂದಿಗೆ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರ ಭವಿಷ್ಯ ರೂಪಿಸಿಕೊಳ್ಳಲು ಆತ್ಮವಿಶ್ವಾಸ ತುಂಬಿದ್ದಾರೆ. ನಿಷ್ಠೆ, ಅಚ್ಚುಕಟ್ಟುತನ ಹಾಗೂ ಸಹೃದಯತೆಯಿಂದ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಮಾಜದ ವಿಶ್ವಾಸ ಗಳಿಸಿದ್ದಾರೆ ಎಂದರು.
ಗದುಗಿನ ತೋಂಟದ ಲಿಂ. ಡಾ. ಸಿದ್ದಲಿಂಗ ಮಹಾಸ್ವಾಮಿಗಳು, ತೋಂಟದ ಡಾ. ಸಿದ್ದರಾಮ ಪೂಜ್ಯರು ಹಾಗೂ ಶಿಕ್ಷಣ ತಜ್ಞ ಪೆÇ್ರ. ಶಿವಾನಂದ ಪಟ್ಟಣಶೆಟ್ಟರ ಅವರ ಚಿಂತನೆಗಳಿಂದ ಪ್ರಭಾವಿತರಾಗಿರುವ ಹೇಮಗಿರಿಮಠ ಅವರು ವೃತ್ತಿಪರ ಪಾವಿತ್ರ್ಯ ಕಾಪಾಡಿಕೊಂಡು ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯ ಹಾಗೂ ಕಾಲೇಜಿನ ಪ್ರಗತಿಗೆ ಅವರ ಕೊಡುಗೆ ಗಮನಾರ್ಹವಾಗಿದೆ ಎಂದು ಜಾಧವ ಹೇಳಿದರು.
ಅಧಿಕಾರ, ಹುದ್ದೆ ಹಾಗೂ ಸ್ಥಾನಮಾನಗಳು ಶಾಶ್ವತವಲ್ಲ; ಆದರೆ ಉತ್ತಮ ಸಂಬಂಧ ಮತ್ತು ಸಾಮರಸ್ಯದ ಒಡನಾಟ ಉಳಿಯುತ್ತದೆ ಎಂಬುದನ್ನು ಹೇಮಗಿರಿಮಠ ಅವರ ಬದುಕು ತೋರಿಸುತ್ತದೆ. ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸೇವಾ ನಿವೃತ್ತಿ ಹೊಂದಿರುವುದು ಅವರ ವೃತ್ತಿಪರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಅವರ ನಿವೃತ್ತ ಜೀವನ ಆರೋಗ್ಯ, ನೆಮ್ಮದಿ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಹೇಮಗಿರಿಮಠ ಅವರ 80ರ ಇಳಿವಯಸ್ಸಿನ ತಾಯಿ ಮುತ್ತವ್ವ ಅಜ್ಜಯ್ಯ ಹೇಮಗಿರಿಮಠ ಅವರು ಉಪಸ್ಥಿತರಿದ್ದು, ಮಗ ಹಾಗೂ ಸೊಸೆಗೆ ಸಿಹಿ ತಿನಿಸಿ ಆಶೀರ್ವದಿಸಿದರು. ಪುತ್ರ ಭವನಕುಮಾರ, ಪುತ್ರಿ ಭೂವಿಕಾ ಹಾಗೂ ಜಾಧವ ಪರಿವಾರದ ಪ್ರಜ್ವಲ ಜಾಧವ ಉಪಸ್ಥಿತರಿದ್ದರು.