ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ,ನಾಯಕತ್ವಗುಣ ಬೆಳೆಸಲು ಸಹಕಾರಿ

ಕೋಲಾರ,ಸೆ,೪-ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವಗುಣ, ಭಾಷಾ ಬೆಳವಣಿಗೆಗೆ ಸಹಕಾರಿಯಾಗಿರುವ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಸಚೇತನ ಕಾರ್ಯಕ್ರಮವನ್ನು ಶಾಲಾ ಪ್ರಾರ್ಥನಾ ವೇಳೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಎಂದು ಸಚೇತನ ಕಾರ್ಯಕ್ರಮದ ರಾಜ್ಯ ವ್ಯವಸ್ಥಾಪಕ ಹಾಗೂ ಮಂತ್ರ ಸಂಸ್ಥೆಯ ವೆಂಕಟೇಶ್ ಕರೆ ನೀಡಿದರು.


ಸಚೇತನ ಕಾರ್ಯಕ್ರಮದ ಅನುಷ್ಟಾನದ ಕುರಿತು ಪರಿಶೀಲನೆ ನಡೆಸಲು ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿದ್ದ ಸಚೇತನ ತಂಡದ ನೇತೃತ್ವ ವಹಿಸಿದ್ದ ಅವರು, ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಚೇತನ ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ಪ್ರದರ್ಶಿಸಿ ಮಕ್ಕಳಿಗೆ ಅರಿವು ಮೂಡಿಸಿ ಮಾತನಾಡಿದರು.
ಸಚೇತನ ಅಡಿ ಮಕ್ಕಳ ತರಗತಿ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನೇ ಚಟುವಟಿಕೆಗಳನ್ನಾಗಿಸಿ ಪ್ರಾರ್ಥನೆ ಸಮಯದಲ್ಲಿ ಗಟ್ಟಿಯಾಗಿ ಓದುವುದು, ಚಿಂತನೆ ಮಾಡುವುದು, ಕಥೆ ಹೇಳುವುದು, ಚರ್ಚೆಗಳಂತಹ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಭಾಷಾ ಬೆಳವಣಿಗೆಗೆ ಪ್ರೇರಣೆ ನೀಡುವ ಉದ್ದೇಶವಾಗಿದೆ ಎಂದರು.


ಮಕ್ಕಳಲ್ಲಿ ಆಲಿಸುವ ಕೌಶಲ್ಯ, ಸಾಮಾಜಿಕ ಜವಾಬ್ದಾರಿ ಮೂಡಿಸುವುದರಿಂದ ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ಮೂಲಕ ಅವರಲ್ಲಿ ಕ್ರಿಯಾಶೀಲತೆ ಹೆಚ್ಚಿಸುವುದು, ಮತ್ತು ವೇದಿಕೆ ಭಯ ಹೋಗಲಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.


ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಪ್ರದರ್ಶಿಸಲು ವಮತ್ತು ತಮ್ಮ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸಲು ಪ್ರೋತ್ಸಾಹಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವುದೇ ಇದರ ಮುಖ್ಯ ಧ್ಯೇಯವಾಗಿದ್ದು, ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ತಿಳಿಸಿದರು.


ಬೆಳಗ್ಗಿನ ಪ್ರಾರ್ಥನಾ ಅವಧಿಯ ಉಪಕ್ರಮದ ಅನುಷ್ಟಾನಕ್ಕಾಗಿ ಶಿಕ್ಷಕರಿಗೆ ಜವಾಬ್ದಾರಿ ಹಂಚಿ, ಕ್ಯಾಲೆಂಡರ್ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿ, ಮಕ್ಕಳಲ್ಲಿ ಜ್ಞಾನ ವೃದ್ದಿ, ಅಂಕ ಗಳಿಕೆಗೆ ಇದು ಹೆಚ್ಚು ಸಹಕಾರಿಯಾಗಿದೆ, ಇದನ್ನು ಸುಮರು ಆರು ತಿಂಗಳ ಕಾಲ ಸಂಶೋಧನೆ ಮಾಡಿ ತರಗತಿವಾರು ಮಕ್ಕಳ ಪಠ್ಯಕ್ರಮಕ್ಕೆ ಸಂಪರ್ಕ ಕಲ್ಪಿಸಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಸಿದ್ದಪಡಿಸಿದ್ದಾರೆ ಎಂದರು.


ಮಕ್ಕಳು ಪ್ರಾರ್ಥನಾ ಅವಧಿಯಲ್ಲಿ ಪ್ರಸ್ತುತಪಡಿಸುವ ಚಟುವಟಿಕೆಗಳನ್ನು ಒಂದು ವಾರ ಮುಂಚಿತವಾಗಿ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು, ಕ್ಯಾಲೆಂಡರ್‌ನಲ್ಲಿ ನೀಡಿದ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ವಾರದ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಬೇಕು ಎಂದರು.


ಪ್ರತಿ ಶನಿವಾರ ದೈಹಿಕ ವ್ಯಾಯಾಮ ಚಟುವಟಿಕೆಗಳನ್ನು ಕೈಗೊಳ್ಳಿ, ಪ್ರತಿ ದಿನ ಕನಿಷ್ಟ ೩ ರಿಂದ ೫ ವಿದ್ಯಾರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕು ಮತ್ತು ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುವ ಮೂಲಕ ಚಟುವಟಿಕೆಗಳಲ್ಲಿ ಪ್ರತಿ ಮಗುವು ಪಾಲ್ಗೊಳ್ಳಬೇಕು ಎಂದರು. ದಿನಕ್ಕೊಂದು ಚಟುವಟಿಕೆಯಂತೆ ಒಂದು ದಿನ ಪರಿಸರದ ಚಿತ್ರಪ್ರದರ್ಶನ, ಮಳೆ ಹಾಡು, ಕವಿಗಳ ಪರಿಚಯ, ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಚಟುವಟಿಕೆಗಳನ್ನು ಮಕ್ಕಳಿಂದಳೇ ಹೇಳಿಸಿ ಉತ್ತರ ಪಡೆಯುವುದರಿಂದ ಉತ್ತಮ ಪ್ರಗತಿ ಸಾಧ್ಯ ಎಂದರು.


ಸಚೇತನ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ರವಿಕುಮಾರ್ ಮಾತನಾಡಿ, ಈಗಾಗಲೇ ಕ್ಯಾಲೆಂಡರ್ ಪ್ರತಿ ಶಾಲೆಗೂ ಒದಗಿಸಲಾಗಿದೆ, ಅದರಲ್ಲಿ ಸೂಚಿಸಿರುವ ಚಟುವಟಿಕೆ ಆಯಾ ದಿನ ಮಕ್ಕಳಿಂದ ನಡೆಸಿದಲ್ಲಿ ಮಕ್ಕಳಲ್ಲಿ ಕಲಿಕಾ ಆಸಕ್ತಿ, ಆತ್ಮವಿಶ್ವಾಸ ಮೂಡಿಸಿದಂತಾಗುತ್ತದೆ ಎಂದು ತಿಳಿಸಿ, ಕೈಗೊಂಡ ಚಟುವಟಿಕೆಗಳನ್ನು ಸಚೇತನ ಗ್ರೂಪ್‌ನಲ್ಲಿ ಹಾಕಿದರೆ ರಾಜ್ಯಾದ್ಯಂತ ವೀಕ್ಷಿಸಲಾಗುತ್ತದೆ, ಮಕ್ಕಳ ಸಮಗ್ರ ಕಲಿಕೆ, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣದ ವೃದ್ದಿಗೆ ಈ ಕಾರ್ಯಕ್ರಮ ಅನುಷ್ಟಾನಗೊಳಿಸಿ ಎಂದರು.


ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ್, ಸಿಆರ್‌ಪಿ ಬಸವರಾಜ್, ಮುಖ್ಯಶಿಕ್ಷಕಿ ತಾಹೇರಾ ನುಸ್ರತ್, ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ,ಸುಗುಣಾ, ಶ್ವೇತಾ, ಕೆ.ಲೀಲಾ, ಶ್ರೀನಿವಾಸಲು, ರಮಾದೇವಿ, ಚೈತ್ರಾ ಮತ್ತಿತರರಿದ್ದರು.