
ಶ್ರೀನಿವಾಸಪುರ, ಜೂ.೨೧-ಜಮೀನಿನ ಖಾತೆ ಬದಲಿಸಿಕೊಳ್ಳಲು ಹಾಗೂ ಪಿಂಚಣಿ ಸೌಲಭ್ಯ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವ ಕಾರಣ, ಅವರಿಗೆ ಅನುಕೂಲವಾಗಲಿ ಎಂದು ಪವತಿ ವಾರಸ್ ಖಾತೆ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊದಲಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್.ಎನ್ ಹೇಳಿದರು.
ತಾಲ್ಲೂಕಿನ ಹೊದಲಿ ಗ್ರಾ.ಪಂ ಆವರಣದಲ್ಲಿ ಗ್ರಾ.ಪಂ ಹಾಗೂ ಕಂದಾಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪವತಿ ವಾರಸ್ ಖಾತೆ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಹಲವರು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಪೋಷಕರ ನಿಧನದ ನಂತರ ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದರು. ಅಂತವರಿಗೆ ಅನುಕೂಲವಾಗಲಿ ಎಂದು ಪವತಿ ವಾರಸ್ ಖಾತೆ ಅಭಿಯಾನದ ಮೂಲಕ ಸುಲಭವಾಗಿ ಖಾತೆ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ಜಮೀನಿನ ಹಕ್ಕು ಪಡೆದವರು ವಿವಿಧ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪಿಂಚಣಿ ಸೌಲಭ್ಯ ಪಡೆಯಲು ಸಾಧ್ಯವಾಗದ ವಯಸ್ಸಾದವರು, ವಿಧವೆಯರು, ವಿಕಲಚೇತನರಿಗೆ ಈ ಅದಾಲತ್ ಮೂಲಕ ಪಿಂಚಣಿ ಸೌಕರ್ಯ ಕಲ್ಪಿಸಲಾಗುತ್ತಿದೆ. ಅರ್ಹರು ಇದರ ಅನುಕೂಲಗಳನ್ನು ಪಡೆದು, ಜೀವನ ಸುಧಾರಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಪ ತಹಶೀಲ್ದಾರ್ ಪವಿತ್ರ ಮಾತನಾಡಿ, ಕಂದಾಯ ಇಲಾಖೆ ಹಾಗೂ ಗ್ರಾ.ಪಂ ಜೊತೆಗೂಡಿ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದ ಹಲವರಿಗೆ ಅನುಕೂಲವಾಗಿದೆ ಎಂದರು.
ಮುಂದಿನ ದಿನಗಳಲ್ಲೂ ಗ್ರಾ.ಪಂ ವ್ಯಾಪ್ತಿಯಲ್ಲಿ ಇದೇ ರೀತಿ ಅದಾಲತ್ ಕಾರ್ಯಕ್ರಮಗಳನ್ನು ಎಲ್ಲಾ ಕಡೆ ಆಯೋಜಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಕೆ.ಗೋಪಾಲರೆಡ್ಡಿ, ಸದಸ್ಯರಾದ ಡಿ.ವಿ ಆಂಜನೇಯರೆಡ್ಡಿ, ಹೆಚ್.ಎಲ್ ಅಶೋಕ್ ಕುಮಾರ್, ಜಿ.ಸಿ ಮಂಜುನಾಥರೆಡ್ಡಿ, ರಾಮಚಂದ್ರ, ಗೋವಿಂದಪ್ಪ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಎಸ್.ಸಂಪತ್ ಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ಸ್ವಾತಿ, ಪೃಥ್ವಿ, ನಿರ್ಮಲ, ಆಸೀಫ್ ಲತೀಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.