
ಮಂಗಳೂರು,ಮೇ೩೦:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಉಲ್ಲಾಳದಲ್ಲಿ ಗುಡ್ಡ ಕುಸಿದ ಪರಿಣಾಮ ಬಾಲಕಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಭಾರಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳು ಪ್ರಾಥಮಿಕ ಪ್ರೌಢಶಾಲೆ, ಸರ್ಕಾರಿ ಅನುದಾನಿತ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಪ್ರಭಾರ ಜಿಲ್ಲಾಧಿಕಾರಿ ಆನಂದ್ ರಜೆ ಘೋಷಿಸಿದ್ದಾರೆ.
ಉಲ್ಲಾಳದಲ್ಲಿ ನಿರಂತರ ಮಳೆಯಿಂದಾಗಿ ಮನೆಯ ಹಿಂಬದಿಯ ಗುಡ್ಡ, ತಡೆಗೋಡೆ ಕುಸಿದು ನಯೀಮಾ (೧೦) ಹಾಗೂ ಪ್ರೇಮಪೂಜಾರಿ (೬೦) ಮೃತಪಟ್ಟಿದ್ದಾರೆ. ರಾತ್ರಿ ಇಡೀ ಸುರಿದ ಭಾರಿ ಮಳೆಯಿಂದಾಗಿ ದೇರಳಕಟ್ಟೆ ಸಮೀಪದ ಕಾನ ಕೆರೆ ಹಾಗೂ ಮುಂಟೆಪದವು ಕೋಡಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ನಯೀಮಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ತನ್ನ ತಾಯಿಯನ್ನು ಬಿಗಿದಪ್ಪಿಕೊಂಡಿದೆ.
ಮುಂಟೆಪದವು ಕೋಡಿಯಲ್ಲಿ ಭಾರಿ ಮಳೆಗೆ ಗುಡ್ಡ ಕುಸಿದು ಕಾಂತಪ್ಪ ಪೂಜಾರಿ ಎಂಬುವರ ಮನೆ ಮೇಲೆ ಬಿದ್ದಿದೆ. ಮನೆಯಲ್ಲಿದ್ದ ಒಂದೇ ಕುಟುಂಬದ ಐವರು ಸಿಕ್ಕಿಹಾಕಿಕೊಂಡಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ತೆರಳಿದ್ದು, ಬದುಕುಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಕೈಗೊಂಡಿದೆ. ಕಾಂತಪ್ಪಪೂಜಾರಿ (೬೫)ಅವರನ್ನು ರಕ್ಷಿಸಲಾಗಿದ್ದು, ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರ ತಾಯಿ, ಮಕ್ಕಳಿಗೆ ಆಕ್ಸಿಜನ್ ವ್ಯವಸ್ಥೆ ಒದಗಿಸಲಾಗಿದೆ.
ತಾಯಿ-ಮಗು ಜೀವಂತವಾಗಿದ್ದು, ಮತ್ತೊಂದು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದೆ.
ಭಾರಿ ಮಳೆಯಿಂದಾಗಿ ಉಲ್ಲಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಂಪಲ, ಕಲ್ಲಾಪು, ಧರ್ಮ ನಗರ, ಕುಚ್ಚಿಲ, ತಲಪಾಡಿ, ವಿದ್ಯಾನಗರ, ಕಲ್ಕಟ್ಟ ಮುಂತಾದ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ರಾತ್ರೋರಾತ್ರಿ ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಘಟನಾ ಸ್ಥಳಕ್ಕೆ ತಾಲ್ಲೂಕು ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್‌ಸೋಮೇಶ್ವರ, ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಗ್ರಾಮಕರಣಿಕ ಸುರೇಶ್ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳೂರಿನಲ್ಲಿ ಕಳೆದ ೨೪ ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿದ್ದು, ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ವಿಪತ್ತು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡೆಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ.
ಮಂಗಳೂರಿಗೆ ತೆರಳಿ: ದಿನೇಶ್, ಡಿಸಿಗೆ ಸಿಎಂ ಸೂಚನೆ
ಮಂಗಳೂರಿನಲ್ಲಿ ಭಾರಿ ಮಳೆಯಿಂದ ಗುಡ್ಡ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಕ್ಷಣವೇ ಮಂಗಳೂರಿಗೆ ತೆರಳುವಂತೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾತ್ರಿ ಬಿದ್ದ ಮಳೆಯಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಭೂ ಕುಸಿತದಿಂದ ಅವಘಡವಾಗಿರುವ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ತಕ್ಷಣ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕ್ರಮ ಕೈಗೊಂಡು ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರಿಗೆ ತೆರಳಿದ ದಿನೇಶ್‌ಗುಂಡೂರಾವ್
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಂಗಳೂರಿಗೆ ಪ್ರಯಾಣ ಬೆಳೆಸಿದರು.
ಇಂದು ಮಂಗಳೂರಿಗೆ ತೆರಳಿರುವ ದಿನೇಶ್ ಗುಂಡೂರಾವ್ ಅವರು, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವರು.
ಇಂದು ಮಂಗಳೂರಿನಲ್ಲೇ ವಾಸ್ತವ್ಯ ಹೂಡಲಿರುವ ಸಚಿವರು, ವಿಪತ್ತು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಜಿಲ್ಲಾಡಳಿಕ್ಕೆ ಸೂಚನೆ ನೀಡಿದ್ದಾರೆ.
ಬೆಂಗಳೂರಿಗೆ ಬಂದಿದ್ದ ಡಿಸಿ ಮಂಗಳೂರಿಗೆ ವಾಪಸ್
ಮುಖ್ಯಮಂತ್ರಿಗಳು ಇಂದು ಕರೆದಿದ್ದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಜಿ.ಪಂ. ಸಿಇಓಗಳ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮಂಗಳೂರಿಗೆ ವಾಪಸ್ ತೆರಳಿದ್ದಾರೆ.
ಪರಿಹಾರ ಕಾರ್ಯಕ್ಕೆ ಖಾದರ್ ಸೂಚನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ಉಲ್ಲಾಳ ತಾಲ್ಲೂಕಿನ ವಿವಿಧೆಡೆ ಗುಡ್ಡ ಕುಸಿತದಿಂದಾಗಿ ಪ್ರಾಣ ಹಾನಿಯಾಗಿದ್ದು, ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಉಲ್ಲಾಳ ತಾಲ್ಲೂಕಿನ ಬೆಳ್ಮಾ ಗ್ರಾಮದ ಕಾನಕೆರೆಯಲ್ಲಿರುವ ನೌಶಾಧ ಅವರ ಮನೆಯ ಹಿಂಬದಿಯ ಗುಡ್ಡ ತಡೆಗೋಡೆ ಕುಸಿದು ಫಾಸಿಮಾ (೧೦) ಜತೆಗೆ ಮಂಜನಾಡಿ ಗ್ರಾಮದ ಮೊಂಟೆಪದವೂ ಸಮೀಪದ ಕೋಡಿ ಎಂಬಲ್ಲಿ ಗುಡ್ಡ ಜರಿದು ಐವರು ಮಣ್ಣಿನಡಿಯಲ್ಲಿ ಸಿಲುಕಿ ಪ್ರೇಮಾ ಪೂಜಾರಿ ಎಂಬುವರು ಮೃತರಾಗಿರುವ ಮಾಹಿತಿ ಪಡೆದ ವಿಧಾನಸಭಾಧ್ಯಕ್ಷ ಯ.ಟಿ. ಖಾದರ್ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಅಗತ್ಯವಿದ್ದರೆ ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸಂಪರ್ಕದಲ್ಲಿಟ್ಟುಕೊಂಡು ಸಹಕರಿಸುವಂತೆ ಸಭಾಧ್ಯಕ್ಷರು ಸೂಚನೆ ನೀಡಿದ್ದಾರೆ.
ಗುಡ್ಡ ಕುಸಿದಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದ್ದು ಸ್ಥಳದಲ್ಲಿ ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.