ನವದೆಹಲಿ, ಸೆ.೨- ರಾಷ್ಟ್ರದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಇತ್ತ ದೆಹಲಿ, ಪಂಜಾಬ್‌ನಲ್ಲಿ ನಾಳೆ( ಸೆ.೩ರ) ತನಕ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇನ್ನೊಂದೆಡೆ ವಾಹನ ದಟ್ಟಣೆ, ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಪರಿಣಾಮ ತಗ್ಗು ಪ್ರದೇಶದಲ್ಲಿರುವ ಜನರು ಪ್ರವಾಹದ ಭೀತಿಗೊಳಗಾಗಿದ್ದಾರೆ.
ಹರಿಯಾಣ, ದೆಹಲಿ ಭಾಗಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಸ್ಥಿತಿಯಲ್ಲಿ ಯಮುನಾ ನದಿ ಹರಿಯುತ್ತಿದೆ. ನಿರಂತರ ಮಳೆ ಮುಂದುವರಿದರೆ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಇದ್ದು, ತಗ್ಗು ಪ್ರದೇಶದಲ್ಲಿರುವ ಜನರಿಗೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.
ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಪಂಜಾಬ್‌ನಲ್ಲಿ ಈವರೆಗೂ ೧೦ ಕ್ಕೂ ಹೆಚ್ಚು ಜಿಲ್ಲೆಗಳು ಜಲಾವೃತಗೊಂಡಿವೆ. ಕನಿಷ್ಠ ೨೯ ಮಂದಿ ಸಾವನ್ನಪ್ಪಿದ್ದಾರೆ. ಪಂಜಾಬ್‌ನಾದ್ಯಂತ ೧,೩೦೦ ಕ್ಕೂ ಹೆಚ್ಚು ಗ್ರಾಮಗಳು ಮುಳುಗಿ ಹೋಗಿದ್ದು, ೬,೫೮೨ ಜನರನ್ನು ೧೨೨ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಉತ್ತರ ಪ್ರದೇಶದ ೨೨ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಪ್ರತಾಪ್‌ಗಢ, ಸೋನ್‌ಭದ್ರ, ಮಿರ್ಜಾಪುರ್, ಭದೋಹಿ, ಜೌನ್‌ಪುರ್, ಹರ್ದೋಯಿ, ಫರೂಖಾಬಾದ್, ಕನೌಜ್, ಕಾನ್ಪುರ್ ಗ್ರಾಮಾಂತರ, ಬಾಗ್‌ಪತ್, ಮೀರತ್, ಅಲಿಗಢ, ಮಥುರಾ, ಹತ್ರಾಸ್, ಕಾಸ್‌ಗಂಜ್‌ನಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆ ಇಂದು ಮತ್ತು ನಾಳೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಯಮುನಾ ನದಿಯ ನೀರಿನ ಮಟ್ಟ ಹೆಚ್ಚಳ..!
ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ನೀರಿನ ಮಟ್ಟವು ನಿರಂತರವಾಗಿ ಹೆಚ್ಚಾಗುತ್ತಿದೆ. ಪರಿಣಾಮ ತಗ್ಗು ಪ್ರದೇಶದಲ್ಲಿರುವ ಜನರು ಪ್ರವಾಹದ ಭೀತಿಗೊಳಗಾಗಿದ್ದಾರೆ.
ಇಂದು ಬೆಳಿಗ್ಗೆ ಯಮುನಾ ನದಿಯ ನೀರಿನ ಮಟ್ಟ ೨೦೫.೭೫ ಮೀಟರ್‌ಗೆ ಏರಿದ್ದು, ಅಪಾಯದ ಮಟ್ಟ (೨೦೫.೩೩)ವನ್ನು ದಾಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಹೆಚ್ಚಾಗಿದೆ.
ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾಗುಪ್ತಾ ಹೇಳಿದ್ದಾರೆ.
ಹಥ್ನಿ ಕುಂಡ್ ಬ್ಯಾರೇಜ್‌ನಿಂದ ೨.೦೭ ಲಕ್ಷ ಕ್ಯೂಸೆಕ್, ವಜೀರಾಬಾದ್ ಬ್ಯಾರೇಜ್‌ನಿಂದ ೬೭,೨೬೦ ಕ್ಯೂಸೆಕ್ ಮತ್ತು ಓಖ್ಲಾ ಬ್ಯಾರೇಜ್‌ನಿಂದ ೬೧,೯೫೮ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳಿಗ್ಗೆ ೭ ಗಂಟೆಗೆ ನೀರಿನ ಮಟ್ಟ ೨೦೫.೭೫ ಮೀಟರ್‌ಗೆ ಏರಿದ್ದು, ಮೂರು ಬ್ಯಾರೇಜ್‌ಗಳಿಂದ ಹೆಚ್ಚಿನ ನೀರು ಹೊರಬಿಡಲಾಗಿದೆ. ಹರಿಯಾಣದಿಂದ ಹೆಚ್ಚಿನ ನೀರು ಬಿಡುಗಡೆಯಾಗಿದ್ದು, ದೆಹಲಿಯಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ. ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆಂದು ತಿಳಿಸಿದರು.
ಯಮುನಾ ನದಿಯ ನೀರಿನ ಮಟ್ಟ ಸ್ಥಿರವಾಗಿ ಏರುತ್ತಿರುವುದರಿಂದ ಮತ್ತು ಇಂದು ಸಂಜೆಯ ವೇಳೆಗೆ ನೀರಿನ ಸ್ಥಳಾಂತರದ ಮಟ್ಟ ೨೦೬ ಮೀಟರ್ ತಲುಪುವ ನಿರೀಕ್ಷೆಯಿರುವುದರಿಂದ ಯಮುನಾ ನದಿ ತೀರದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಸ್ತೆಯಲ್ಲೇ ನಿಂತ ವಾಹನ ಸವಾರರು!
ಗುರುಗ್ರಾಮ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ದೆಹಲಿ-ಜೈಪುರ ಹೆದ್ದಾರಿಯಲ್ಲಿ ೭ ಕಿಲೋಮೀಟರ್‌ಗಳಷ್ಟು ದೂರ ಸಂಚಾರ ದಟ್ಟಣೆ ಉಂಟಾಗಿದ್ದು ವಾಹನ ಸವಾರರು ಸುಮಾರು ಮೂರೂ ಗಂಟೆಗು ಹೆಚ್ಚಿನ ಕಾಲ ಹೆದ್ದಾರಿಯಲ್ಲೇ ಸಿಲುಕಿಕೊಂಡಿರುವ ಘಟನೆ ಮಂಗಳವಾರವೂ ನಡೆದಿದೆ.
ದೆಹಲಿ-ಜೈಪುರ ಹೆದ್ದಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ಹೆಚ್ಚಿನ ವಾಹನಗಳು ಕೆಟ್ಟು ಹೆದ್ದಾರಿಯಲ್ಲೇ ನಿಂತ ಪರಿಣಾಮ ಸುಮಾರು ಏಳರಿಂದ ಎಂಟು ಕಿಲೋಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ. ಕಚೇರಿಯಿಂದ ಮನೆಗೆ ಹೊರಟಿದ್ದ ಅದೆಷ್ಟೋ ಮಂದಿ ಹೆದ್ದಾರಿಯಲ್ಲೇ ಸಿಲುಕಿಕೊಂಡು ಪರದಾಡುವಂತಾಗಿದೆ.























