
ಬೆಂಗಳೂರ,ಸೆ.೬-ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮುಂದಿನ ಏಳು ದಿನಗಳ ಕಾಲ ಮಳೆಯ ಅಬ್ಬರ ಹೆಚ್ಚಾಗಲಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳಗಿನಿಂದ ಮಧ್ಯಾಹ್ನದವರೆಗೆ ಸುಡು ಬಿಸಿಲು ಮತ್ತು ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಈ ಅವಧಿಯಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ ೩೧.೩ಲಿಸಿ ಮತ್ತು ಕನಿಷ್ಠ ತಾಪಮಾನ ೨೦.೮ಲಿಸಿ ದಾಖಲಾಗುವ ಸಾಧ್ಯತೆಯಿದ್ದು, ಗಂಟೆಗೆ ೩೦ ರಿಂದ ೪೦ ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಬೆಂಗಳೂರು ಸೇರಿದಂತೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿಯೂ ಮಳೆಯ ವಾತಾವರಣ ಮುಂದುವರಿಯಲಿದೆ.
ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ ೭ ದಿನಗಳ ಕಾಲ ಸುರಿಯಲಿರುವ ಭಾರೀ ಮಳೆಯು ಸೆಪ್ಟೆಂಬರ್ ೮ರ ನಂತರ ಮತ್ತಷ್ಟು ತೀವ್ರಗೊಳ್ಳಲಿದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಜೊತೆಗೆ ವೇಗವಾಗಿ ಗಾಳಿ ಬೀಸಲಿದೆ. ದಕ್ಷಿಣ ಒಳನಾಡಿನಲ್ಲಿ ವಾತಾವರಣ ವೈಪರೀತ್ಯ ಕಂಡುಬರಲಿದ್ದು, ಉತ್ತರ ಒಳನಾಡಿನ ದಾವಣಗೆರೆ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳ ಕೆಲವೆಡೆ ತುಂತುರು ಮಳೆಯಾಗಲಿದೆ.
ಆದರೆ ಗದಗ, ಬಾಗಲಕೋಟೆ, ವಿಜಯಪುರ, ವಿಜಯನಗರ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ೭ರ ನಂತರ ಬಹುತೇಕ ಒಣ ಹವಾಮಾನ ಇರಲಿದ್ದು, ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಸ್ಪಷ್ಟಪಡಿಸಿದೆ.
























