ಮಹಾನಗರದಲ್ಲಿ ಧಾರಾಕಾರ ಮಳೆ

ಹುಬ್ಬಳ್ಳಿ, ಮೇ21: ಮುಂಗಾರು ಹೊಸ್ತಿಲಲ್ಲಿಯೇ ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ನಿಧಾನವಾಗಿ ರಂಗೇರುತ್ತಿದ್ದು, ಇಂದೂ ಮಹಾನಗರದಲ್ಲಿ ಮಳೆ ಅಬ್ಬರಿಸಿ ಸುರಿದಿದ್ದರಿಂದ ಜನಜೀವನ ಕೆಲ ಮಟ್ಟಿಗೆ ಅಸ್ತವ್ಯಸ್ತಗೊಳ್ಳುವಂತಾಗಿತ್ತು.

ಮುಂಜಾನೆ ಆರಂಭವಾದ ಮಳೆ ಸುಮಾರು ಗಂಟೆಗಳ ಕಾಲ ನಿರಂತರವಾಗಿ ಸುರಿದು ಎಲ್ಲೆಂದರಲ್ಲಿ ಜಲದರ್ಶನ ಮಾಡಿಸಿತು.

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು, ಚರಂಡಿಗಳು ಎಲ್ಲೆಡೆ ನೀರು ತುಂಬಿ ಹರಿದವು.

ನಗರದ ಪ್ರಮುಖ ಸ್ಥಳಗಳಾದ ದುರ್ಗದ ಬೈಲ್, ಜನತಾ ಬಜಾರ್, ಹಳೇಹುಬ್ಬಳ್ಳಿ ಪ್ರದೇಶಗಳಲ್ಲಿ ಸುರಿವ ಮಳೆಯಿಂದಾಗಿ ವ್ಯಾಪಾರವಿಲ್ಲದೇ ಬೆಳಿಗ್ಗೆಯಿಂದಲೂ ಹೂವು, ಹಣ್ಣು, ತರಕಾರಿ ಸೇರಿದಂತೆ ಬೀದಿಬದಿಯ ವ್ಯಾಪಾರಸ್ಥರು ತಲೆ ಮೇಲೆ ಕೈಹೊತ್ತು ಕೂಡುವ ಸ್ಥಿತಿಯುಂಟಾಗಿತ್ತು.

ನಗರದ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ವಸತಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಯಿತು.

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳ ಮೇಲೆ ನೀರು ನಿಂತು ಅಲ್ಲಲ್ಲಿ ವಾಹನ ಸವಾರರಿಗೆ ಸಂಚಾರಕ್ಕೆ ಅಡತಡೆಯಾಯಿತು.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಧಾರವಾಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಿನ್ನೆಯೂ ಜಿಲ್ಲೆಯ ಕೆಲ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಮೂರು ದಿನ ಮಳೆ ಸುರಿಯಲಿದ್ದು, ಜಿಲ್ಲಾಡಳಿತದಿಂದ ಎಲ್ಲೆಡೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.