
ಚಿಕ್ಕಬಳ್ಳಾಪುರ:ಮೇ ೨೦-ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಮುಂಜಾನೆ ಜೋರು ಮಳೆಯಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಾತ್ರಿ ೯ ಗಂಟೆಯಿಂದ ತಡರಾತ್ರಿವರೆಗೂ ಸುರಿದ ಮಳೆ ಮತ್ತೆ ಬೆಳಗ್ಗೆ ಐದು ಗಂಟೆಯಿಂದ ಸುಮಾರು ೩ ಗಂಟೆಗೂ ಅಧಿಕ ಕಾಲ ಸುರಿದ ಜೋರು ಮಳೆಗೆ ನಗರದಲ್ಲಿನ ಚರಂಡಿಗಳೆಲ್ಲಾ ತುಂಬಿ ಕೊಳಚೆ ನೀರು ರಸ್ತೆಗೆ ಹರಿದಿದೆ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ನದಿ, ಕೆರೆ ಕುಂಟೆ, ಚೆಕ್‌ಡ್ಯಾಂಗಳಿಗೆ ನೀರು ಹರಿದಿದೆ.
ತಗ್ಗು ಪ್ರದೇಶದಲ್ಲಿನ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ನಗರದ ತಗ್ಗು ಪ್ರದೇಶಗಳಾದ ನಕ್ಕಲಕುಂಟೆ, ೮ನೇ ವಾರ್ಡ್ ನ ಜಿಲ್ಲಾಸ್ಪತ್ರೆ, ಧರ್ಮ ಛತ್ರ ರಸ್ತೆ, ಕೊಂದಡಸ್ವಾಮಿ ದೇವಾಲಯ ರಸ್ತೆ, ಕಂದವಾರ ಬಾಗಿಲು, ವಾಪಸಂದ್ರ, ಕೆಳಗಿನ ತೋಟಗಳಲ್ಲಿ ಹಲವಾರು ಪ್ರದೇಶಗಳಲ್ಲಿ ತ್ಯಾಜ್ಯ ನೀರು ಮನೆಗಳಿಗೆ ನುಗ್ಗಿದೆ. ಹೀಗಾಗಿ ಜನರು ಪರದಾಡುವಂತಾಯಿತು.
ನಗರದ ಕೆಲವೆಡೆ ಅವೈಜ್ಞಾನಿಕ ನಗರೋತ್ಥಾನ ಕಾಮಗಾರಿಗಳಿಂದ ಒಳಚರಂಡಿ(ಯುಜಿಡಿ) ಕೊಚ್ಚೆ ನೀರು ಮನೆಗಳಿಗೆ ನುಗ್ಗಿದ್ದು, ಅವೈಜ್ಞಾನಿಕ ಕಾಮಗಾರಿ ಕೈಗೊಂಡ ನಗರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ೬೯ರ ಅಗಲೀಕರಣ ಕಾಮಗಾರಿಯಿಂದ ಎಂಜಿ ರಸ್ತೆಯ ಎರಡೂ ಬದಿ ಚರಂಡಿ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗಾಗಿ ಅಗೆದಿರುವ ಮಣ್ಣು ರಸ್ತೆಗೆ ಬಿದ್ದಿದ್ದು ಇರರಿಂದಲೂ ಮಳೆನೀರು ರಸ್ತೆಯ ಮೇಲೆ ಹರಿದಿದ್ದರಿಂದ ಕಾಮಗಾರಿಯ ವಿರುದ್ಧ ಸ್ಥಳೀಯ ನಿವಾಸಿಗಳು ಕಿಡಿಕಾರಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ವಾಹನಗಳ ಚಾಲಕರು ವಾಹನ ಚಲಾಯಿಸಲು ಪರದಾಡಿದರು.