
ಕೋಲಾರ,ಡಿ.೩೧- ರಾಜ್ಯ ಸರ್ಕಾರ ಹಳ್ಳಿ ಗ್ರಾಮಗಳು ಅಭಿವೃದ್ಧಿ ಆಗಬೇಕು. ಹಳ್ಳಿಗಳು ಅಭಿವೃದ್ಧಿಯಾದರೆ ಜಿಲ್ಲೆ ಮತ್ತು ರಾಜ್ಯ ತಾನಾಗೆ ಬದಲಾವಣೆಯಾಗುತ್ತದೆ ಎಂಬ ಭರವಸೆಯಿಂದ ಹಲವಾರು ಯೋಜನೆಗಳನ್ನು ನೀಡುತ್ತಿದೆ. ಆದರೆ ಆ ಯೋಜನೆಗಳು ಸಾರ್ವಜನಿಕರಿಗೆ ಸರಿಯಾಗಿ ತಲುಪುತ್ತಿಲ್ಲ. ವಡಗೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳೇ ಇದಕ್ಕೆ ಸಾಕ್ಷಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ವಿ ನಾರಾಯಣ ಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ
ಗ್ರಾಮ ಪಂಚಾಯಿತಿ ಮುಂಭಾಗ ಅಕ್ರಮಗಳ ವಿರುದ್ಧ ಡಿಸೇಂಬರ್ ೯ರಂದು ಪ್ರತಿಭಟನೆ ಮಾಡಿದ್ದೆವು. ಅಂದು ನಮಗೆ ತಾಲೂಕು ಪಂಚಾಯಿತಿ ಇಒ ಮಂಜುನಾಥ್ ಅವರು ಸೂಕ್ತ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಪಂಚಾಯಿತಿಗೆ ಭೇಟಿ ನೀಡಿ ದಾಖಲೆಗಳನ್ನು ನೋಡಿ ಇಲ್ಲಿ ತುಂಬಾನೇ ಹೆಚ್ಚು ಕಡಿಮೆಯಾಗಿದೆ ಜಿಲ್ಲಾ ಪಂಚಾಯತ್ ಗಮನಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ. ಇಲ್ಲಿನ ಅಕ್ರಮಗಳು ಸಂಪೂರ್ಣ ತನಿಖೆಯಾಗುವವರೆಗೂ ಸಂಘಟನೆ ಬಿಡೋದಿಲ್ಲ. ಈ ವಿಷಯದ ಕುರಿತು ಜಿಲ್ಲಾ ಪಂಚಾಯತ್ ಮುಂದೆಯೂ ಪ್ರತಿಭಟನೆ ಮಾಡುತ್ತೇವೆ. ಸಾರ್ವಜನಿಕರ ಸೌಲಭ್ಯ ಹಣವನ್ನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು ಗುಳುಂ ಮಾಡಿರುವುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಬಿ ಎಂ ಮಂಜುನಾಥ್ ಅವರು ದಾಖಲೆ ಪರಿಶೀಲನೆ ಮಾಡಿ ಮಾತನಾಡಿ ಇಲ್ಲಿನ ದಾಖಲೆ ನೋಡಿದಾಗ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಇದು ನಮ್ಮ ಮಟ್ಟದಲ್ಲಿ ಬಗೆಹರಿಯುವಂತದ್ದಲ್ಲ. ದೊಡ್ಡ ಮಟ್ಟದಲ್ಲಿ ತನಿಖೆಯಾಗಬೇಕಿದೆ. ಪೂರ್ತಿ ತನಿಖೆಯಾಗಲು ಸ್ಥಳ ಪರಿಶೀಲನೆಗಳು ಮಾಡಬೇಕಿದೆ. ನಾನೊಬ್ಬನೇ ಇದ್ದೀನಿ ಹಾಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಇಂದೇ ಪತ್ರ ಬರೆಯುತ್ತೇನೆ. ಅವರು ಎರಡು ಅಥವಾ ಮೂರು ತಂಡಗಳ ಮುಖಾಂತರ ತನಿಖೆ ಮಾಡುತ್ತಾರೆ. ತಪ್ಪಿದ್ದಲ್ಲಿ ನಮ್ಮ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ರವೀಂದ್ರ ಕುಮಾರ್, ವೇಮಗಲ್ ಸುಧಾಕರ್, ತಾಲೂಕು ಸಂಚಾಲಕ ಶೆಟ್ಟಿ ಮಾದಮಂಗಲ ರಾಜಣ್ಣ, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಸೊನ್ನೆನಹಳ್ಳಿ ಮಂಜುಳ, ಶ್ರೀ ಲಕ್ಷ್ಮೀ, ಶ್ರೀನಿವಾಸಪುರ ಗುರುಮೂರ್ತಿ, ಚನ್ನಪ್ಪನಹಳ್ಳಿ ಚಂದ್ರಣ್ಣ, ವೇಮಗಲ್ ರಮೇಶ್, ಹಾರ್ಜೆನಹಳ್ಳಿ ಇಮ್ರಾನ್ ಪಾಷ ಸೇರಿದಂತೆ ಇತರರು ಇದ್ದರು.
























