ಗುರುಮಠಕಲ್:ಅ.೨೦:ಸತತ ಮಳೆಯಿಂದ ನೀರಿನಲ್ಲಿ ಮುಳುಗುತ್ತಿರುವ ಬೆಳೆಗೆ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸಮಿಕ್ಷೆ ಮಾಡಿ ತಕ್ಷಣ ಪರಿಹಾರ ನೀಡಬೇಕೆಂದು ಕರವೇ ಅಧ್ಯಕ್ಷ ಶರಣಬಸಪ್ಪ ಯಲ್ಹೆರಿ ಅಗ್ರಹ ಮಾಡಿದರು. ಗುರುಮಠಕಲ್ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಬೆಳೆ ಹಾನಿಯಾಗಿದ್ದು, ಕೂಡಲೇ ಸರಕಾರ ರೈತರ ನೆರವಿಗೆ ಧಾವಿಸಬೇಕು. ತ್ವರಿತವಾಗಿ ಜಂಟಿ ಸಮಿಕ್ಷೆ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಹೆಸರು, ಹತ್ತಿ, ತೊಗರಿ, ಇನ್ನಿತರೆ ಬೆಳೆಗಳು ನೀರಿನಲ್ಲಿ ನಿಂತಿವೆ. ಸಾಲ-ಸೂಲ ಮಾಡಿ ಒಂದು ಎಕರೆಗೆ ೪೦ ರಿಂದ ೫೦ ಸಾವಿರ ರೂಪಾಯಿಗಳು ಖರ್ಚು ಮಾಡಿ ಬೆಳೆದ ರೈತರಿಗೆ ಪ್ರಕೃತಿಯ ಮುನುಸಿನಿಂದಾಗಿ ಭೀಕರ ಹಸಿ ಬರದ ಬರೆ ಬಿದ್ದಂತಾಗಿದೆ. ಬೆಳೆದ ಬೆಳೆ ಕೈಗೆ ಬಂದಿದ್ದರೆ ಲಕ್ಷಾಂತರ ರೂಪಾಯಿ ರೈತರ ಕೈಗೆ ಸೇರಿ ಆಸರೆಯಾಗುತ್ತಿತ್ತು. ಆದರೆ ಮಳೆರಾಯರ ಮುನುಸಿಂದಾಗಿ ಇದ್ದಕ್ಕಿದ್ದಂತೆ ೪-೫ ದಿನಗಳಿಂದ ಅತಿ ಹೆಚ್ಚು ಮಳೆ ಬಂದು ಹೊಲಗಳಲ್ಲಿ ನೀರು ನಿಂತು ಬೆಳೆದ ಬೆಳೆ ಕೊಳೆತು ಹೋಗುವ ಸ್ಥಿತಿಯಲ್ಲಿರುತ್ತವೆ. ಹಾಗಾಗಿ ರೈತರು ಕೃಷಿಯನ್ನು ಬಿಟ್ಟು ಬದುಕಲು ಗೂಳೆ ಹೋಗಬೇಕು ಇಲ್ಲವೇ ಆತ್ಮಹತ್ಯೆಗೆ ಶರಣಾಗಬೇಕೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವರ್ಷ ರೈತರಿಗೆ ರಸಗೊಬ್ಬರ ಸಿಗದೇ ಪರದಾಡುವ ಪರಿಸ್ಥಿತಿಯಲ್ಲಿ ಇದ್ದರೂ ಕೂಡ ರೈತರು ಕೃಷಿಯನ್ನು ಬಿಡದೇ ಅತಿಹೆಚ್ಚು ಬಿತ್ತನೆ ಮಾಡಿ ಬೆಳೆದಿದ್ದರು. ಆದ ಕಾರಣ ಸರಕಾರ ಎಚ್ಚೆತ್ತುಕೊಂಡು ಕಂದಾಯ ಹಾಗೂ ಕೃಷಿ ಇಲಾಖೆಗಳ ಜಂಟಿ ಸಮಿಕ್ಷೆಯನ್ನು ಕೈಗೊಂಡು ನೊಂದ ರೈತರಿಗೆ ತ್ವರಿತವಾಗಿ ಎಕರೆಗೆ ಸುಮಾರು ೫೦ ಸಾವಿರ ರೂಪಾಯಿಗಳಂತೆ ಪರಿಹಾರ ವಿತರಿಸಲು ಮುಂದಾಗಬೇಕು. ಸಂಕಷ್ಟಕ್ಕೆ ಸಿಲುಕಿದ ಅನ್ನದಾತರ ಬೆನ್ನಿಗೆ ಸರಕಾರ ನಿಂತು ರೈತರಿಗೆ ಶೀಘ್ರವಾಗಿ ಪರ್ಯಾಯ ನೀಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ. ಒಂದುವೇಳೆ ದೇಶದ ಬೆನ್ನೆಲುಬಾದಂತಹ ರೈತ ಸಂಕಷ್ಟದಲ್ಲಿರುವಾಗ ಸರಕಾರ ಮತ್ತು ಅಧಿಕಾರಿಗಳು ಅವರಿಗೆ ಸೂಕ್ತ ಪರಿಹಾರ ನೀಡುವದರಲ್ಲಿ ವಿಳಂಬವಾದರೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯಾವತ್ತು ರೈತರ ಪರ ಮುಂಚುಣಿಯಲ್ಲಿ ನಿಂತು ಹೋರಾಟ ಮಾಡುತ್ತೇವೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಲ್ಹೆರಿಯವರು ಸರಕಾರಕ್ಕೆ ಅಗ್ರಹ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಗೌರವಧ್ಯಕ್ಷ ಭೀಮಾಶಂಕರ ಪಡಿಗೆ, ಜಗದೀಶ್ ನಸಲವಾಯಿ, ಶರಣು ಮೇಧಾ, ವೆಂಕಟೇಶ ಚಿಟಿಕನಪಲ್ಲಿ, ಮೋನೇಶ್ ಮಾಧ್ವರ, ತಾಯಪ್ಪ ಕಾಳಬೆಳಗುಂದಿ, ದೇವಸಿಂಗ್ ಮಾಧ್ವರ, ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

























