ಎಚ್‌ಡಿಕೆ ಖಾಲಿ ಟ್ರಂಕ್ ಡಿಕೆಶಿ ಕಿಡಿ

ಬೆಂಗಳೂರು, ಅ. ೨೬- ಬೆಂಗಳೂರಿನ ನಾಗರಿಕರು ಆಸ್ತಿಗಳನ್ನು ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಿಕೊಳ್ಳಬೇಡಿ. ಇದು ಬೋಗಸ್ ಎಂದು ಹೇಳಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದು ವಾಗ್ದಾಳಿ ನಡೆಸಿದ್ದಾರೆ.


ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿಂದು ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ವಿದ್ಯಾವಂತ ನಾಗರಿಕರು ಎ ಖಾತಾ ಪರಿವರ್ತನೆ ಒಪ್ಪುತ್ತಿರುವುದಕ್ಕೆ ಧನ್ಯವಾದ ಎಂದು ಹೇಳಿದರು.


ಬಿ ಖಾತಾ ಆಸ್ತಿಗಳನ್ನು ಎ ಖಾತಾ ಪರಿವರ್ತನೆ ಪ್ರಕ್ರಿಯೆ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದು ಅವರು ಜರಿದರು.


ಎ ಖಾತಾ ಆಸ್ತಿ ದಾಖಲೆ. ಸಾರ್ವಜನಿಕರ ಆಸ್ತಿ ದಾಖಲೆಗಳನ್ನು ಸರಿಪಡಿಸಿ ಅವುಗಳನ್ನು ಜನರಿಗೆ ನೀಡುವುದು ನಮ್ಮ ಸರ್ಕಾರದ ೬ನೇ ಗ್ಯಾರಂಟಿ. ಇದಕ್ಕಾಗಿ ನಾವು ಕೇವಲ ಶೇ. ೫ ರಷ್ಟು ಮಾತ್ರ ಅಭಿವೃದ್ಧಿ ಶುಲ್ಕ ಕೇಳಿದ್ದೇವೆ ಎಂದರು.


ಎ ಖಾತಾ ಬಿ ಖಾತಾ ಪರಿವರ್ತನೆಗೆ ವಿರೋಧ ವ್ಯಕ್ತಪಡಿಸಿರುವ ಕುಮಾರಸ್ವಾಮಿಯವರ ನಡೆ ಸರಿಯಲ್ಲ. ನಿಮ್ಮಂಥ ಪ್ರಜ್ಞಾವಂತ ನಾಗರಿಕರು ಇದನ್ನು ಒಪ್ಪಿ ಖಾತಾ ಪರಿವರ್ತನೆ ಮಾಡಿಸಿಕೊಳ್ಳುತ್ತಿರುವುದಕ್ಕೆ ಧನ್ಯವಾದ ಎಂದು ಅವರು ಹೇಳಿದರು.


ಇದೇ ವೇಳೆ ನಾಗರಿಕರೊಬ್ಬರು ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಒಳ್ಳೆಯ ಕೆಲಸ ಎಂದು ಪ್ರಶಂಸಿಸಿದರು.
ಇದಕ್ಕೆ ಡಿ.ಕೆ. ಶಿವಕುಮಾರ್ ರವರು ನಾಗರಿಕರಿಗೆ ಕೈ ಮುಗಿದು ನಮಿಸಿದರು.

ಕಬ್ಬನ್ ಪಾರ್ಕ್‌ನಲ್ಲಿ ನಡಿಗೆ


ಶನಿವಾರ ಮತ್ತು ಭಾನುವಾರ ಬೆಂಗಳೂರಿನ ವಿವಿಧ ಉದ್ಯಾನವನಗಳಲ್ಲಿ ನಡಿಗೆ ಕಾರ್ಯಕ್ರಮ ಕೈಗೊಂಡು ಸಾರ್ವಜನಿಕರ ಅಹವಾಲು ಆಲಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಕಬ್ಬನ್ ಪಾರ್ಕ್‌ನಲ್ಲಿ ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾರ್ವಜನಿಕರ ಹತ್ತು ಹಲವು ಸಮಸ್ಯೆಗಳಿಗೆ ಕಿವಿಯಾದರು.

ಕಬ್ಬನ್‌ಪಾರ್ಕ್ ’ನಡಿಗೆ’ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಹಾಗೂ ನಾಗರಿಕರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂವಾದ ಸಲಹೆ ಪಡೆದರು.

ಕಬ್ಬನ್ ಪಾರ್ಕ್‌ನಲ್ಲಿ ನಡಿಗೆ ಸಂದರ್ಭದಲ್ಲಿ ಕಬ್ಬನ್ ಪಾರ್ಕ್‌ನಲ್ಲಿರುವ ಮೈಸೂರು ಅರಸರಾಗಿದ್ದ ಚಾಮರಾಜ ಒಡೆಯರ್, ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.


ಮಕ್ಕಳ ಜತೆ ಸೆಲ್ಫಿ ತೆಗೆಸಿಕೊಂಡರು. ಹಾಗೆಯೇ ಕಬ್ಬನ್ ಪಾರ್ಕ್‌ನಲ್ಲಿ ವಾಯು ವಿಹಾರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮ ಜತೆ ಕರೆದುಕೊಂಡು ಬಂದಿದ್ದ ಸೈಬಿರಿಯನ್ ಹಸ್ಕಿ ಶ್ವಾನದ ಮೈದಡವಿ ಶ್ವಾನ ಪ್ರೀತಿ ತೋರಿದರು.


ಹಾಗೆಯೇ ಕಬ್ಬನ್ ಪಾರ್ಕ್‌ನಲ್ಲಿ ಮುಂಜಾನೆ ಸಂಗೀತ ಕಚೇರಿ ನಡೆಸುತ್ತಿದ್ದ ವಾದ್ಯ ವೃಂದದವರಿಗೂ ಅವರು ಶುಭಕೋರಿದರು. ಜತೆಗೆ ಕಬ್ಬನ್ ಪಾರ್ಕ್‌ನ ನಡಿಗೆದಾರರ ಅಹವಾಲುಗಳನ್ನು ಆಲಿಸಿದರು.


ಕಬ್ಬನ್ ಪಾರ್ಕ್‌ನಲ್ಲಿ ವಾಹನಗಳನ್ನು ನಿಷೇಧಿಸಿ, ಕಬ್ಬನ್ ಪಾರ್ಕ್‌ನ್ನು ಲಾಲ್‌ಬಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಕಬ್ಬನ್‌ಪಾರ್ಕ್‌ಗೂ ಪ್ರವೇಶ ದರ ನಿಗದಿ ಮಾಡಿ, ಆಗ ಮಾತ್ರ ಕಬ್ಬನ್ ಪಾರ್ಕ್‌ನ್ನು ಉಳಿಸಲು ಸಾಧ್ಯ ಎಂಬ ಮನವಿಗಳನ್ನು ನಾಗರಿಕರು ಉಪಮುಖ್ಯಮಂತ್ರಿಗಳಿಗೆ ಮಾಡಿದರು.


ಎಲ್ಲ ಸಮಸ್ಯೆಗಳಿಗೆ ಗಮನ ನೀಡಿ ಕಬ್ಬನ್ ಪಾರ್ಕ್‌ನ ಸರ್ವಾಂಗೀಣ ಅಭಿವೃದ್ಧಿ ಜತೆಗೆ ಬೆಂಗಳೂರಿನ ಅಭಿವೃದ್ಧಿಗೂ ಗಮನ ಹರಿಸುವ ಭರವಸೆಯನ್ನು ಡಿ.ಕೆ. ಶಿವಕುಮಾರ್ ನೀಡಿದರು.