
ಬೆಂಗಳೂರು,ಮೇ೨೯: ಕಾಂಗ್ರೆಸ್‌ನಲ್ಲಿ ದೆಹಲಿ ಮಟ್ಟದಲ್ಲಿ ಪ್ರಭಾವಿಯಾಗಿರುವ ರಾಜ್ಯದ ಹಿರಿಯ ಕಾಂಗ್ರೆಸ್‌ನ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ರಾಜ್ಯ ಸಚಿವ ಸಂಪುಟ ಪುನಾರಚನೆಯ ಸುದ್ದಿಗಳು ಹರಿದಾಡುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆಯೇ ಸದಾಶಿವ ನಗರದಲ್ಲಿರುವ ಬಿ.ಕೆ ಹರಿಪ್ರಸಾದ್ ಅವರ ನಿವಾಸಕ್ಕೆ ಆಗಮಿಸಿ ಅವರ ಜತೆ ಸುಮಾರು ಹೊತ್ತು ಚರ್ಚೆ ನಡೆಸಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ,
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾiಯ್ಯ ಅವರು ಮುಖ್ಯಮಂತ್ರಿಯಾದ ನಂತರ ಅವರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆಯನ್ನು ಬಿ.ಕೆ ಹರಿಪ್ರಸಾದ್ ಹೊಂದಿದ್ದರು. ಆದರೆ, ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಇದರಿಂದ ಹರಿಪ್ರಸಾದ್ ಅಸಮಾಧಾನಗೊಂಡಿದ್ದರು.
ನಂತರ ಅವರ ಅಸಮಾಧಾನವನ್ನು ಶಮನ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಫಲರಾಗಿ ಮುಂದೆ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನೂ ನೀಡಿದ್ದರು. ಅದರಂತೆ ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಬಿ.ಕೆ ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಮುಖ್ಯಮಂತ್ರಿಗಳು ಹರಿಪ್ರಸಾದ್ ಅವರ ಜತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಸಭಾಪತಿ ಸ್ಥಾನಕ್ಕೆ ಬಿಕೆಎಚ್ ನಕಾರ
ವಿಧಾನ ಪರಿಷತ್ತಿನ ಸಭಾಪತಿಯಾಗಿ ಹರಿಪ್ರಸಾದ್ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕಾಂಗ್ರೆಸ್ ವಲಯಗಳು ಕೇಳಿ ಬಂದಿತ್ತಾದರೂ ಅದಕ್ಕೆ ಹರಿಪ್ರಸಾದ್ ಅವರು ಒಪ್ಪಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಹರಿಪ್ರಸಾದ್ ಹರಿಯಾಣ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಭಾಪತಿಯಾದರೆ ಪಕ್ಷ ಚಟುವಟಿಕೆಗಳಿಂದ ಅಂತರ ಕಾಯ್ದುಕೊ
ಳ್ಳಬೇಕಾಗುತ್ತದೆ. ಹಾಗಾಗಿ ಸಭಾಪತಿ ಸ್ಥಾನ ಯಾವುದೇ ಕಾರಣಕ್ಕೂ ಬೇಡ ಎಂದು ಹರಿಪ್ರಸಾದ್ ಈಗಾಗಲೇ ಸ್ಪಷ್ಟಪಡಿಸಿದ್ದು, ಇದೇ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಇಂದೂ ಸಹ ಹೇಳಿದ್ದಾರೆ ಎಂದು ಹೇಳಲಾಗಿದೆ.
ಸಭಾಪತಿ ಸ್ಥಾನಕ್ಕೆ ಬಿ.ಕೆ ಹರಿಪ್ರಸಾದ್ ಒಲವು ಹೊಂದಿಲ್ಲದೇ ಇರುವುದರಿಂದ ಮುಂದಿನ ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಮಂಗಳೂರು ಸೌಹಾರ್ದತೆ ಕುರಿತು ಚರ್ಚೆ: ಸಿದ್ದು
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಇಂದು ಬೆಳಗಿನ ಉಪಾಹಾರ ಮಾಡಿದ್ದು, ಸಾಮಾನ್ಯ ವಿಷಯಗಳ ಜೊತೆಗೆ ಮಂಗಳೂರಿನಲ್ಲಿ ಸೌಹಾರ್ದತೆ ನೆಲೆಸಬೇಕು, ದ್ವೇಷ ಯಾವುದೇ ಕಾರಣಕ್ಕೂ ಇರಬಾರದು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ನಾನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೋಮು ಗಲಭೆಗಳನ್ನು ಉಂಟುಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಕಾನೂನಿನ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು.ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದರು.
ಡಿಸಿ ಸಿಇಒಗಳೊಂದಿಗೆ ಎರಡು ದಿನ ಸಭೆ
ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ನಡೆಯಲಿರುವ ಡಿ.ಸಿ.ಹಾಗೂ ಸಿಇಒ ಗಳ ಸಭೆಯಲ್ಲಿ ಮುಂಗಾರು ಮಳೆ ಪರಿಸ್ಥಿತಿಗಳ ಬಗ್ಗೆ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ತಿಳಿಸಿದರು.