ಸಂಜೆವಾಣಿ ವಾರ್ತೆ,
ವಿಜಯಪುರ, ಅ. ೨೫: ವಾಹನ ಸಾಲದ ಕಂತು ಪಾವತಿಸುವಂತೆ ಸಾಲಗಾರರ ಮೇಲೆ ಒತ್ತಡ ಹೇರುವುದರ ಜತೆಗೆ, ಬಾಕಿ ಕಂತುಗಳ ನೆಪದಲ್ಲಿ ವಾಹನಗಳನ್ನು ಬಲವಂತವಾಗಿ ವಶಕ್ಕೆ ಪಡೆದು ಮಾಲೀಕರು ಹಾಗೂ ಚಾಲಕರಿಗೆ ತೊಂದರೆ ನೀಡುತ್ತಿರುವ ಹಣಕಾಸು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ವೇದಿಕೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಬರಗಾಲದ ಪರಿಸ್ಥಿತಿಯಿಂದಾಗಿ ಜನರು ಕುಟುಂಬ ನಿರ್ವಹಣೆಗೂ ಪರದಾಡುವಂತಹ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಹಣಕಾಸು ಸಂಸ್ಥೆಗಳು ವಾಹನ ಸಾಲಗಾರರ ಮೇಲೆ ಕಂತಿನ ಹಣ ಪಾವತಿಸುವಂತೆ ನಿರಂತರ ಒತ್ತಡ ಹೇರುತ್ತಿವೆ. ಬಾಕಿ ಕಂತುಗಳನ್ನು ಪಾವತಿಸುವುದಾಗಿ ತಿಳಿಸಿದರೂ ಕೆಲವೊಮ್ಮೆ ವಾಹನಗಳನ್ನು ಬಲವಂತವಾಗಿ ವಶಕ್ಕೆ ಪಡೆಯಲಾಗುತ್ತಿದೆ ಎಂದು ವೇದಿಕೆ ಆರೋಪಿಸಿದೆ.
ವಾಹನಗಳನ್ನು ವಶಕ್ಕೆ ಪಡೆದ ಬಳಿಕ ಅವುಗಳನ್ನು ಬಿಡಿಸಿಕೊಳ್ಳಲು ತಗಲುವ ವೆಚ್ಚವನ್ನೂ ವಾಹನ ಮಾಲೀಕರ ಮೇಲೆಯೇ ಹೊರಿಸಲಾಗುತ್ತಿದೆ. ಇದರಿಂದ ವಾಹನವನ್ನು ಜೀವನೋಪಾಯಕ್ಕೆ ಬಳಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ಅನೇಕ ಮಾಲೀಕರು ಹಾಗೂ ಚಾಲಕರು ಆರ್ಥಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಹೀಗಾಗಿ ವಾಹನ ಸಾಲಗಾರರಿಗೆ ಕಿರುಕುಳ ನೀಡುವ ಹಾಗೂ ಕಾನೂನುಬಾಹಿರವಾಗಿ ವಾಹನಗಳನ್ನು ವಶಕ್ಕೆ ಪಡೆಯುವ ಹಣಕಾಸು ಸಂಸ್ಥೆಗಳ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ವಾಹನ ಮಾಲೀಕರು ಹಾಗೂ ಚಾಲಕರಿಗೆ ರಕ್ಷಣೆ ಒದಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ವೇದಿಕೆಯ ಕೋಲಾರ ತಾಲೂಕು ಅಧ್ಯಕ್ಷ ರವಿಗೊಳಸಂಗಿ, ನಿಡಗುಂದಿ ತಾಲೂಕು ಅಧ್ಯಕ್ಷ ಆನಂದ ಹಡಗಲಿ, ವಿಜಯ ಬಾಗಿ, ಶ್ರೀಧರ, ಆನಂದ ರಾಠೋಡ, ವಿಕ್ಕಿ ರಾಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




















