Home ಜಿಲ್ಲೆ ಕೆಲಸದ ಸ್ಥಳದಲ್ಲಿ ಕಿರುಕುಳ: ಕಾನೂನಿನ ಮೂಲಕ ಉತ್ತರ ನೀಡಿ:ನಾಗಲಕ್ಷ್ಮೀ ಚೌದ್ರಿ ಕರೆ

ಕೆಲಸದ ಸ್ಥಳದಲ್ಲಿ ಕಿರುಕುಳ: ಕಾನೂನಿನ ಮೂಲಕ ಉತ್ತರ ನೀಡಿ:ನಾಗಲಕ್ಷ್ಮೀ ಚೌದ್ರಿ ಕರೆ

ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨೫: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮಹಿಳೆಯರು ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿರದೆ, ತಮ್ಮ ಹಕ್ಕು ಹಾಗೂ ಕಾನೂನುಬದ್ಧ ರಕ್ಷಣೆಯ ಬಗ್ಗೆ ಅರಿವು ಹೊಂದಿ ಧೈರ್ಯದಿಂದ ದೂರು ನೀಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದ್ರಿ ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸ್ಥಳೀಯ ಹಾಗೂ ಆಂತರಿಕ ದೂರು ನಿವಾರಣಾ ಸಮಿತಿ ಅಧ್ಯಕ್ಷರಿಗೆ ಆಯೋಜಿಸಿದ್ದ PಔSಊ ಕಾಯ್ದೆ-೨೦೧೩ರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೆಲಸದ ಸ್ಥಳದಲ್ಲಿ ಮಹಿಳೆಯರ ಗೌರವ, ಸುರಕ್ಷತೆ ಹಾಗೂ ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಮಹಿಳೆಯರಿಗೆ ಕಿರುಕುಳ, ದೌರ್ಜನ್ಯ ಅಥವಾ ಅನ್ಯಾಯ ಎದುರಾದಾಗ ಅದನ್ನು ಮುಚ್ಚಿಡುವ ಬದಲು ಕಾಯ್ದೆಯಡಿ ರಚಿಸಲಾಗಿರುವ ಆಂತರಿಕ ದೂರು ಸಮಿತಿಗೆ ದೂರು ಸಲ್ಲಿಸಬೇಕು. ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಮಿತಿಗಳು ನಿಷ್ಪಕ್ಷಪಾತವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಾನೂನು ಗೊತ್ತಿದ್ದರೆ ಅನ್ಯಾಯದ ವಿರುದ್ಧ ಹೋರಾಟ ಸಾಧ್ಯ

PಔSಊ ಕಾಯ್ದೆಯ ಉದ್ದೇಶ, ನಿಯಮಗಳು ಹಾಗೂ ಆಂತರಿಕ ದೂರು ಸಮಿತಿಯ ಅಧಿಕಾರ ಮತ್ತು ಜವಾಬ್ದಾರಿಗಳ ಕುರಿತು ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಸಂಪೂರ್ಣ ಅರಿವು ಹೊಂದಿರಬೇಕು. ಕಾನೂನು ಅರಿವಿನ ಕೊರತೆಯಿಂದ ಯಾವುದೇ ಮಹಿಳೆ ತನ್ನ ಹಕ್ಕುಗಳಿಂದ ವಂಚಿತಳಾಗಬಾರದು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಕಾನೂನು ಅರಿವು ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ ಎಂದು ನಾಗಲಕ್ಷ್ಮೀ ಚೌದ್ರಿ ತಿಳಿಸಿದರು.

ನೊಂದ ಮಹಿಳೆಯರಿಗೆ ಉಚಿತ ಕಾನೂನು ನೆರವು

ಮಹಿಳೆಯರು ಅನ್ಯಾಯಕ್ಕೆ ಒಳಗಾದ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ಸೇವೆ ಹಾಗೂ ಅಗತ್ಯ ಕಾನೂನು ನೆರವು ಪಡೆಯಬಹುದು. ಯಾವುದೇ ಹಿಂಜರಿಕೆ ಅಥವಾ ಭಯವಿಲ್ಲದೆ ಪ್ರಾಧಿಕಾರವನ್ನು ಸಂಪರ್ಕಿಸಿ ಕಾನೂನು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತರಬೇತಿದಾರ ಪ್ರಕಾಶ ಅವರು ಪಿಪಿಟಿ ಮೂಲಕ PಔSಊ ಕಾಯ್ದೆಯ ವಿವಿಧ ಅಂಶಗಳು, ಆಂತರಿಕ ದೂರು ಸಮಿತಿಯ ರಚನೆ ಮತ್ತು ಜವಾಬ್ದಾರಿಗಳು, ದೂರು ಸ್ವೀಕಾರ ಹಾಗೂ ವಿಚಾರಣೆ ನಡೆಸುವ ವಿಧಾನ ಸೇರಿದಂತೆ ಕಾಯ್ದೆಯ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು.

ಶಿಶು ಪಾಲನಾ ಕೇಂದ್ರಕ್ಕೆ ಭೇಟಿ

ತರಬೇತಿ ಕಾರ್ಯಾಗಾರದ ಬಳಿಕ ಡಾ. ನಾಗಲಕ್ಷ್ಮೀ ಚೌದ್ರಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಪಾಲನೆ, ಆರೈಕೆ ಹಾಗೂ ಅವರಿಗೆ ಕಲ್ಪಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಮಕ್ಕಳಿಗೆ ಸುರಕ್ಷಿತ ಹಾಗೂ ಪೂರಕ ವಾತಾವರಣ ಕಲ್ಪಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್. ಹಾಗರಗಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ. ಸಂತೋಷಕುಮಾರ ಎಚ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.