
ಕಲಬುರಗಿ,ಜ.25: ಧರ್ಮದ ಹಾದಿಯಲ್ಲಿ ಮುನ್ನೆಡೆದರೆ ಸಮಾಜದಲ್ಲಿ ಒಗ್ಗಟ್ಟಿಗೆ ಪ್ರೇರಣೆಯಾಗುತ್ತದೆಯಲ್ಲದೇ ಸದ್ಗತಿಗೆ ನಾಂದಿಯಾಗುತ್ತದೆ ಎಂದು ಮಾಜಿ ಸಚಿವ ಮಾಲೀಕಯ್ಯ ವಿ. ಗುತ್ತೇದಾರ ಹೇಳಿದರು.
ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ನವೀಕೃತಗೊಂಡ ಹನುಮಾನ ಮಂದಿರದಲ್ಲಿ ಜೈ ಹನುಮಾನ ಮೂರ್ತಿಯ ಪುನ: ಪ್ರಾಣ ಪ್ರತಿಷ್ಠಾನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯನ್ನುದ್ದೇಶಿ ಮಾತನಾಡಿದರು.
ಧರ್ಮದ ಹಾದಿಯಲ್ಲಿ ನಡೆದರೆ ಧರ್ಮವೇ ರಕ್ಷಿಸುತ್ತದೆ. ಎಲ್ಲದಕ್ಕೂ ನ್ಯಾಯ ಧರ್ಮವೇ ಅಂತೀಮ. ಪ್ರಮುಖವಾಗಿ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಎಂದ ಗುತ್ತೇದಾರ ಅವರು, ಗ್ರಾಮಸ್ಥರೆಲ್ಲರೂ ಒಗ್ಗಟ್ಟಾದರೆ ಹತ್ತಾರು ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು.
ಅಫಜಲಪುರ ಮಳೇಂದ್ರ ಮಠದ ವೀರ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ, ಶನಿ ದೂರ ಮಾಡುವ ಶಕ್ತಿ ವೀರಾಂಜನೆಯ ಹೊಂದಿದ್ದಾನೆ. ದೇವರು ಕಾಡುತ್ತಾನೆ ಎಂಬುದು ಸುಳ್ಳು. ಸತ್ಯ, ನಿಷ್ಠೆ ಯಿಂದ ನಡೆದರೆ ಎಲ್ಲ ಕಷ್ಟಗಳು ದೂರಾಗುತ್ತವೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಬಡದಾಳ ತೇರಿನ ಮಠದದ ಡಾ. ಚೆನ್ನಮಲ್ಲ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ, ಭಕ್ತಿಗೆ ಇನ್ನೊಂದು ಹೆಸರೇ ಹನುಮಂತ ಆಗಿದ್ದು, ಹನುಮಾನ ಭಕ್ತಿ ನಿಷ್ಠೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತಿವಿದೆ ಎಂದು ಹೇಳಿದರು.
ನಿಂಬರ್ಗಾದ ಶಿವಲಿಂಗೇಶ್ವರ ಮಹಾಸ್ವಾಮಿಗಳು,ಮೇಳಕುಂದಾದ ಶಶಿಕುಮಾರ ದೇವರು, ಸ್ಥಳೀಯ ಮಹಾಂತೇಶ್ವರ ಮಠದ ಷಡಕ್ಷರಿ ದೇವರು, ಮಹಾಂಗಾಂವದ ಸಂಗೀತೇಶ್ವರಿ ಅಮ್ಮ ಸೇರಿದಂತೆ ಇತರರು ಹಾಜರಿದ್ದರು. ನಿವೃತ್ತ ಶಿಕ್ಷಕ ಶಾಮರಾವ ಪೆÇೀದ್ದಾರ ನಿರೂಪಿಸಿದರು. ಹಣಮಂತರಾವ ಹಿರೇಗೌಡ ವಂದಿಸಿದರು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಡದಾಳ, ಅಫಜಲಪುರ ಶ್ರೀಗಳಿಂದ ಧಾರ್ಮಿಕ ಕಾರ್ಯ
ನವೀಕೃತಗೊಂಡ ಹನುಮಾನ ಮಂದಿರದಲ್ಲಿ ಬಡದಾಳದ ಪೂಜ್ಯ ಡಾ. ಚೆನ್ನಮಲ್ಲ ಶಿವಾಚಾರ್ಯರು ಜೈ ಹನುಮಾನ ನೂತನ ಮೂರ್ತಿಯ ಪುನ: ಪ್ರತಿಷ್ಠಾಪನೆ ಹಾಗೂ ಅಫಜಲಪುರದ ಮಳೇಂದ್ರ ಶಿವಾಚಾರ್ಯರಿಂದ ಕಳಸಾರೋಹಣ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಂದ ಜರುಗಿತು. ಇದಕ್ಕೂ ಮುಂಚೆ ಮಹಿಳೆಯರಿಂದ ಗ್ರಾಮದ ಪ್ರಮುಖ ಬೀದಿಗಳುದ್ದಕ್ಕೂ ಪಂಚ ಕಳಸ ಮೆರವಣಿಗೆ ನಡೆಯಿತು.

























