
ಸುರೇಶ್ ಬಿಜನಳ್ಳಿ
ಸೇಡಂ, ಮೇ,06: ಇಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಭೂಮಿ ಬರಡಾಗುತ್ತಿದೆ ಎಂಬ ದೂರಿನ ನಡುವೆ,ಪ್ರಗತಿಪರ ರೈತರೊಬ್ಬರು ಸಾವಯವ ಕೃಷಿಯ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಕೇವಲ 3 ಎಕರೆ ಜಮೀನಿನಲ್ಲಿ 500 ಮಾವಿನ ಗಿಡಗಳನ್ನು ನೈಸರ್ಗಿಕವಾಗಿ ಬೆಳೆಸಿ, ವಾರ್ಷಿಕ 3 ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ರೈತ ಎಲ್ಲರ ಗಮನ ಸೆಳೆದಿದ್ದಾರೆ.
ತಾಲೂಕಿನ ಹಂಗನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ಜಗದೀಶ್,ಷಣ್ಮುಖ ರುದ್ರಮುನಿ ಸಹೋದರರು ಸುಮಾರು 2018ರಲ್ಲಿ ಮೂರು ಎಕರೆ ಜಮೀನಿನಲ್ಲಿ 500 ಮಾವಿನ ಗಿಡಗಳನ್ನು ಬೆಳೆಯಲು ಆರಂಭಿಸಿದರು.ಐದು ವರ್ಷಗಳ ನಂತರ ಪ್ರತಿ ವರ್ಷ ಮೂರು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಇವರು ವಿಶೇಷವಾಗಿ ರಾಸಾಯನಿಕ ಮುಕ್ತ ಕೃಷಿಗೆ ಒಲವು ನೀಡಲಾಗಿದ್ದು ಸಾಮಾನ್ಯವಾಗಿ ಮಾವು ಬೆಳೆಯಲು ಅತಿಯಾದ ರಾಸಾಯನಿಕ ಸಿಂಪಡಣೆ ಅಗತ್ಯ ಎಂಬ ನಂಬಿಕೆ ಇದೆ. ಆದರೆ, ಈ ರೈತರು ಅದನ್ನು ಸುಳ್ಳು ಮಾಡಿದ್ದಾರೆ. ಸಂಪೂರ್ಣವಾಗಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು, ಕೊಟ್ಟಿಗೆ ಗೊಬ್ಬರ, ಜೀವಾಮೃತ ಮತ್ತು ನೈಸರ್ಗಿಕ ಕೀಟನಾಶಕಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡಿದ್ದಾರೆ. ಇದರಿಂದ ಮಾವಿನ ಹಣ್ಣಿನ ರುಚಿ ಮತ್ತು ಗುಣಮಟ್ಟ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸೃಷ್ಟಿಯಾಗಿದೆ. ಪಟ್ಟಣದಲ್ಲಿರುವ ನಮ್ಮ ಬಜಾರ್ ನಲ್ಲಿ, ವಿವಿಧ ಹಣ್ಣಿನ ಅಂಗಡಿ, ಜ್ಯೂಸ್ ಅಂಗಡಿಗಳಲ್ಲಿ ಈ ಹಣ್ಣು ಮಾರಾಟ ಮಾಡುವ ಪ್ರಮುಖ ಸ್ಥಳಗಳಾಗಿದ್ದು ಜೊತೆಗೆ ಕಲಬುರ್ಗಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ರಾಜ್ಯಕ್ಕೆ ಕಳಿಸಿಕೊಡಲಾಗುತ್ತಿದೆ ಎಂದು ರೈತರಾದ ಜಗದೀಶ್ ರುದ್ರಮುನಿ ಹಂಗನಹಳ್ಳಿ ಅವರು ಮಾಧ್ಯಮದವರೊಂದಿಗೆ ಅಭಿಪ್ರಾಯ ಹಂಚಿಕೊಂಡರು. 3 ಎಕರೆಯಲ್ಲಿ 500 ಗಿಡಗಳ ನಿರ್ವಹಣೆ ಕಡಿಮೆ ವಿಸ್ತೀರ್ಣದ ಭೂಮಿಯಲ್ಲಿ ಹೆಚ್ಚು ಗಿಡಗಳನ್ನು ನೆಡುವ ಸಾಂದ್ರ ಕೃಷಿ ಮಾದರಿಯನ್ನು ಇವರು ಅನುಸರಿಸಿದ್ದಾರೆ. 3 ಎಕರೆಯಲ್ಲಿ ವೈಜ್ಞಾನಿಕ ಅಂತರ ಕಾಯ್ದುಕೊಂಡು 500 ಗಿಡಗಳನ್ನು ನಾಟಿ ಮಾಡಲಾಗಿದ್ದು, ಪ್ರತಿಯೊಂದು ಗಿಡಕ್ಕೂ ಸಮರ್ಪಕವಾಗಿ ಪೆÇೀಷಕಾಂಶ ಸಿಗುವಂತೆ ನೋಡಿಕೊಳ್ಳಲಾಗಿದೆ. ಆದಾಯದ ಲೆಕ್ಕಾಚಾರದಲ್ಲಿ ಆರಂಭದಲ್ಲಿ ಸಾವಯವ ಕೃಷಿ ಕಷ್ಟವೆನಿಸಿದರೂ, ಒಮ್ಮೆ ಭೂಮಿ ಸಿದ್ಧವಾದರೆ ಖರ್ಚು ಕಡಿಮೆಯಾಗುತ್ತದೆ. ಕಳೆದ ಎರಡು ಮೂರು ವರ್ಷಗಳಿಂದ 500 ಗಿಡಗಳಿಂದ ಉತ್ತಮ ಇಳುವರಿ ಬಂದಿದ್ದು, ಎಲ್ಲಾ ಖರ್ಚು ಕಳೆದು 3 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದೇನೆ ಎಂದು ರೈತರು ಸಂತಸ ಹಂಚಿಕೊಂಡಿದ್ದಾರೆ.
ಇಂದಿನ ಯುವಕರು ಕೃಷಿ ಎಂದರೆ ನಷ್ಟದ ಕೆಲಸ ಎಂದು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಆದರೆ ಹಂಗನಹಳ್ಳಿ ರೈತ ಜಗದೀಶ್, ಷಣ್ಮುಖ ರುದ್ರಮುನಿ ಸಹೋದರರು 3 ಎಕರೆಯಲ್ಲಿ 500 ಮಾವಿನ ಗಿಡಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿ ಲಾಭ ಗಳಿಸಿರುವುದು ಯುವಕರಿಗೆ ಕೃಷಿಯ ಮೇಲೆ ಭರವಸೆ ಮೂಡಿಸಿದೆ. ಇದು ಕೇವಲ ಕೃಷಿಯಲ್ಲ,ಇದೊಂದು ಉದ್ಯಮ ಎಂಬುದು ಸಾಬೀತು ಮಾಡಿದ್ದಾರೆ.
ಭಗವಂತರಾವ್ ಪಾಟೀಲ್ ಕೊಂಕನಹಳ್ಳಿ
ಭಾರತ್ ವಿಕಾಸ್ ಸಂಗಮ ಪ್ರಚಾರಕರು ಸೇಡಂ




















