ಕರಕುಶಲ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮ

ಬೀದರ್: ಡಿ.೬:ಬಿದ್ರಿ ಕರಕುಶಲದ ಬೆಳವಣಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಕಲಾತ್ಮಕ ಅರಿವು ಮೂಡಿಸುವ ಉದ್ದೇಶದಿಂದ, ಶ್ರೀಮತಿ ಇಂದಿರಾಬಾಯಿ ಗುರುತಪ್ಪಾ ಶಟಕಾರ ಪ್ರೌಢಶಾಲೆಯಲ್ಲಿ ಗುರುವಾರ ಕರಕುಶಲ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕರಕುಶಲಕರ್ಮಿಗಳ ಕೌಶಲ್ಯ ವೃದ್ಧಿ, ಉತ್ಪಾದನಾ ಗುಣಮಟ್ಟ ಸುಧಾರಣೆ ಹಾಗೂ ಮಾರುಕಟ್ಟೆ ಜ್ಞಾನದ ಅಭಿವೃದ್ಧಿ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಉದ್ಘಾಟಕರಾಗಿ ಭಾಗವಹಿಸಿದ ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷ ಬಿ.ಜಿ. ಶೆಟಕಾರ ಮಾತನಾಡಿ, “ಬಿದ್ರಿ ಕಲೆ ಬೀದರ ಜಿಲ್ಲೆಯ ಹೆಮ್ಮೆಯ ಪರಂಪರೆ. ದೇಶ-ವಿದೇಶಗಳಲ್ಲಿ ಬಿದ್ರಿ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ವಿದ್ಯಾರ್ಥಿಗಳು ಕೂಡ ಈ ಕಲೆಯ ಇತಿಹಾಸ ಮತ್ತು ಅದರ ವೈಶಿಷ್ಟ್ಯಗಳನ್ನು ಅರಿತುಕೊಳ್ಳುವುದು ಅಗತ್ಯ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಣತ ಕರಕುಶಲಕಾರರು ಬಿದ್ರಿ ಕಲೆಯ ತಯಾರಿಕಾ ವಿಧಾನ, ತಾಂತ್ರಿಕ ಹಂತಗಳು ಹಾಗೂ ಕೆತ್ತನೆಯ ಪ್ರಾತ್ಯಕ್ಷಿಕೆ ನೀಡಿದರು. ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಮಾತನಾಡಿ, “ಬಿದ್ರಿ ಕರಕುಶಲದ ಅಸ್ತಿತ್ವ ಕಾಪಾಡಲು ಮತ್ತು ಮತ್ತಷ್ಟು ಬೆಳವಣಿಗೆಗೆ ಕುಶಲಕರ್ಮಿಗಳು ಒಗ್ಗಟ್ಟಿನಿಂದ ಉತ್ಪಾದಕರ ಕಂಪನಿಯನ್ನು ಬಲಪಡಿಸಬೇಕು,” ಎಂದು ಕರೆ ನೀಡಿದರು.
ಧಾರವಾಡದ ಕರಕುಶಲ ಅಭಿವೃದ್ಧಿ ಅಧಿಕಾರಿ ಶ್ರೀ ಸುಶಾಂತ್ ಅವರು ಇಲಾಖೆಯ ಮೂಲಕ ಕರಕುಶಲಕರ್ಮಿಗಳಿಗೆ ಲಭ್ಯವಿರುವ ಸೌಲಭ್ಯಗಳು, ತರಬೇತಿ ಮತ್ತು ಯೋಜನೆಗಳ ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಷಣ ಮಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜಕುಮಾರ ಮಾತನಾಡಿ”ಬಿದ್ರಿ ಕಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಪರಂಪರೆ. ತಂತ್ರಜ್ಞಾನ, ಆನ್‌ಲೈನ್ ಮಾರುಕಟ್ಟೆ ಮತ್ತು ವಿನೂತನ ವಿನ್ಯಾಸಗಳ ಬಳಕೆ ಮೂಲಕ ಈ ಕಲೆಯನ್ನು ಜಾಗತಿಕ ಸ್ಪರ್ಧೆಯಲ್ಲಿ ಇನ್ನಷ್ಟು ಬಲಪಡಿಸಬಹುದು,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಗೋಲ್ಡ್ ಬಿದ್ರಿ ಕರಕುಶಲ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಶಫಿಯೋದ್ದಿನ್, ಶಿಕ್ಷಕರು ಹಾಗೂ ಶಾಲೆಯ ಸುಮಾರು ಮೂರು ನೂರು ವಿದ್ಯಾರ್ಥಿಗಳು ಭಾಗವಹಿಸಿದರು.