
ಕಲಬುರಗಿ: ಮಾನವನಿಗೆ ಬರುವ ಬಹುತೇಕ ಸಾಮಾನ್ಯ ಖಾಯಿಲೆಗಳಿಗೆ ಪ್ರಮುಖ ಕಾರಣ ನೀರು ಮತ್ತು ಆಹಾರ. ಅನೇಕ ಕೆಲಸದಲ್ಲಿ ತೊಡಗಿ ಕೈಗಳನ್ನು ಸ್ವಚ್ಚಗೊಳಿಸದೆ ಆಹಾರ ಸೇವಿಸುವದರಿಂದ ಆಹಾರವು ವಿಷ ಹಾಗೂ ಕಲುಷಿತವಾಗಿ, ದೇಹದ ಮೇಲೆ ಪರಿಣಾಮ ಉಂಟಾಗುತ್ತದೆ. ಶುಚಿತ್ವ ಮತ್ತು ಆರೋಗ್ಯಕ್ಕಾಗಿ ಆಗಾಗ್ಗೆ ಕೈಗಳನ್ನು ಸ್ವಚ್ಚಗೊಳಿಸುವುದು ತುಂಬಾ ಅಗತ್ಯವಾಗಿದೆ ಎಂದು ಖ್ಯಾತ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ಬಸವಗಂಗಾ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಕೈ ಶುಚಿತ್ವ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಎಲ್ಲರಿಗೂ ಕೈ ನೈರ್ಮಲ್ಯ ಅಗತ್ಯವಾಗಿದೆ. ಕೈಯಿಂದ ವೈರಾಣುಗಳು ನಮ್ಮ ದೇಹವನ್ನು ಪ್ರವೇಶಿಸಿ ಹಲವು ಸೊಂಕಿಗೆ ಕಾರಣವಾಗುತ್ತದೆ. ಕೈ-ಕಾಲು ತೊಳೆಯುವುದು ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಅನುಸರಿಸಿಕೊಂಡು ಬರುತ್ತಿದ್ದಾರೆ. ದೇಹಕ್ಕೆ ಸಂಬಂಧಿಸಿದಂತೆ ಸಕಲ ಕಾರ್ಯವನ್ನು ಮಾಡುವ ಅಂಗ ಕೈಗಳಾಗಿವೆ. ಬಾಲ್ಯದಿಂದಲೇ ಆರೋಗ್ಯದ ಬಗ್ಗೆ ಜ್ಞಾನವನ್ನು ಬೆಳೆಸಬೇಕು. ಉಗುರುಗಳನ್ನು ಆಗಾಗ್ಗೆ ಕತ್ತರಿಬೇಕು. ಕೈಗಳನ್ನು ಸ್ಚಚ್ಛಗೊಳಿಸಿಕೊಳ್ಳಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ದತ್ತು ಹಡಪದ, ಸುಭಾಷ ರಟಕಲ್ ಸೇರಿದಂತೆ ಇನ್ನಿತರರಿದ್ದರು.


















