Home ಜಿಲ್ಲೆ ವಿಜೃಂಭಣೆಯಿಂದ ಜರುಗಿದ ಗುರುರಾಯರ ರಥೋತ್ಸವ

ವಿಜೃಂಭಣೆಯಿಂದ ಜರುಗಿದ ಗುರುರಾಯರ ರಥೋತ್ಸವ

ಮುದ್ದೇಬಿಹಾಳ : ಪಟ್ಟಣದ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ 355 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಕಾರ್ಯಕ್ರಮವು ಭಕ್ತ ಸಮೂಹದ ಮದ್ಯೆ ಸಂಭ್ರಮದಿಂದ ಜರುಗಿತು.
ಸ್ಥಳೀಯ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಮೂಲ ಬೃಂದಾವನ ಸನ್ನಿಧಿಯಲ್ಲಿ ರಥೋತ್ಸವ ಅಂಗವಾಗಿ ಶ್ರೀ ಗುರುರಾಯರ ಬೃಂದಾವನಕ್ಕೆ ವಿಶೇಷ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರುಗಿದವು. ಅಲ್ಲದೇ ಬೆಳಿಗ್ಗೆ 6 ಘಂಟೆಗೆ ಸುಪ್ರಭಾತ, ವಾಯುಸ್ತುತಿ, ಅಷ್ಟೋತ್ತರ, ಮಂತ್ರ ಪಠಣೆ, ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಪುಷ್ಪಾರ್ಚನೆ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಮಹಾಮಂಗಳಾರತಿ ಕಾರ್ಯಕ್ರಮ ಜರುಗಿದವಲ್ಲದೇ 11 ಘಂಟೆಗೆ ಸಕಲ ಭಕ್ತಾಧಿಗಳೊಂದಿಗೆ ಶ್ರೀರಾಯರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಕುಳ್ಳಿರಿಸಿ ರಥೋತ್ಸವವನ್ನು ವಾಧ್ಯ ವೈಭವದೊಂದಿಗೆ ಮುಖ್ಯಬೀದಿಗಳಲ್ಲಿ ಹಾಯ್ದು ಪುನಃ ಮಂದಿರಕ್ಕೆ ಬಂದು ತಲುಪಿತು.
ದಾರಿಯುದ್ದಕ್ಕೂ ಶ್ರೀ ವೆಂಕಟೇಶ್ವರ ಭಜನಾ ಮಂಡಳಿ ಹಾಗೂ ಶಿವಚಿದಂಬರೇಶ್ವರ ಭಜನಾಮಂಡಳಿಯವರಿಂದ ಭಜನೆ, ದಾಸರ ಹಾಡುಗಳು, ಮಹಿಳೆಯರಿಂದ ಕೋಲಾಟ, ಜಯ ಘೋಷಗಳೊಂದಿಗೆ ಜರುಗಿದವು.
ರಸ್ತೆಯುದ್ದಕ್ಕೂ ಭಕ್ತರು ಶ್ರೀಗುರುರಾಯರ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ರಾಘವೇಂದ್ರ ಬೃಂದಾವನ ಸನ್ನಿಧಿಯ ಅಧ್ಯಕ್ಷರಾದ ಎಸ್.ಆರ್. ಕುಲಕರ್ಣಿ, ಉಪಾಧ್ಯಕ್ಷರಾದ ಕೆ.ಬಿ. ದೇಶಪಾಂಡೆ, ಕಾರ್ಯದರ್ಶಿ ವ್ಹಿ.ಜಿ. ಪಾಟೀಲ, ಸದಸ್ಯರಾದ ಗುರುರಾಜ ದೊಡ್ಡಿಹಾಳ, ಬಿ.ಪಿ. ಕುಲಕರ್ಣಿ, ವ್ಹಿ.ಆರ್. ಪದಕಿ, ಶ್ರೀನಿವಾಸ ಗಜೇಂದ್ರಗಡ, ರಮೇಶ ಲೋಕರೆ, ಅನೀಲ್ ಕುಲಕರ್ಣಿ, ಅರವಿಂದ ಕುಲಕರ್ಣಿ, ವಾಸುದೇವ ಶಾಸ್ತ್ರಿ ಮೊದಲಾದವರು ವಹಿಸಿದ್ದರು.
ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು.