Home ಜಿಲ್ಲೆ ಆಧ್ಯಾತ್ಮದ ಬೆಳಕು ಹರಡಿದ ಮಹಾನ್ ಸಂತ ಗುರುದೇವ ರಾನಡೆ: ಪ್ರದೀಪ ಮೇಟಗುಡ್ಡ ಮಹಾರಾಜರು

ಆಧ್ಯಾತ್ಮದ ಬೆಳಕು ಹರಡಿದ ಮಹಾನ್ ಸಂತ ಗುರುದೇವ ರಾನಡೆ: ಪ್ರದೀಪ ಮೇಟಗುಡ್ಡ ಮಹಾರಾಜರು

ಜಮಖಂಡಿ, ಜು 4: ನಗರದ ಪಿ.ಬಿ. ಪ್ರೌಢಶಾಲಾ ಆವರಣದಲ್ಲಿ ಗುರುದೇವ ರಾನಡೆ ಅವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಗುರುದೇವ ರಾನಡೆ ಅವರ ಪ್ರತಿಮೆಗೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರದೀಪ ಮೇಟಗುಡ್ಡ ಮಹಾರಾಜರು, ಇಂಚಗಿರಿ ಆಧ್ಯಾತ್ಮ ಸಂಪ್ರದಾಯದ ತತ್ವ, ಆದರ್ಶ ಮತ್ತು ವಿಚಾರಗಳನ್ನು ನಾಡಿನಾದ್ಯಂತ ಪ್ರಚಾರ ಮಾಡಿದ ಕೀರ್ತಿ ಸಮರ್ಥ ಸದ್ಗುರು ಗುರುದೇವ ರಾನಡೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜಮಖಂಡಿಯಿಂದಲೇ ಆಧ್ಯಾತ್ಮಿಕ ಚಿಂತನೆಯ ಒಳಹರಿವು ಆರಂಭಗೊಂಡಿದ್ದು, ಸಮರ್ಥ ಸದ್ಗುರು ಬಾವುಸಾಯಿ ಮಹಾರಾಜರಿಂದ ಉಪದೇಶ ಪಡೆದ ಗುರುದೇವ ರಾನಡೆ ಅವರು ಆಧ್ಯಾತ್ಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಜಮಖಂಡಿಯಲ್ಲಿ ಗುರುದೇವ ರಾನಡೆ ಅವರು ವಾಸಿಸಿದ್ದ ಮನೆ ಇಂದು ಆಶ್ರಮವಾಗಿ ರೂಪುಗೊಂಡಿದ್ದು, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಸಪ್ತಾಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಶಿವು ಶಿರಸಂಗಿ ಮಹಾರಾಜರು ಮಾತನಾಡಿ, ಗುರುದೇವ ರಾನಡೆ ಅವರು ತಮ್ಮ ಶೈಕ್ಷಣಿಕ ಜೀವನದಲ್ಲಿ ಉನ್ನತ ಸಾಧನೆ ಮಾಡಿದ್ದು, ಪುಣೆ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಹೇಳಿದರು. ಇಂಚಗಿರಿ ಸಂಪ್ರದಾಯದ ಬಾವುಸಾಯಿ ಮಹಾರಾಜರಿಂದ ನಾಮೋಪದೇಶ ಪಡೆದ ಅವರು ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯ ಪ್ರಕಾಶ ಅರಕೇರಿ, ಉಪಪ್ರಾಚಾರ್ಯ ಎಂ.ಎಸ್. ಬುಜರುಕ, ಶಿಕ್ಷಕರಾದ ಬಿ.ಎಚ್. ತೆಗ್ಗಿ, ಎಂ.ಎಸ್. ಹಲಗಲಿ, ಶ್ರೀಧರ ಗೌರನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.