
ಹುಮನಾಬಾದ:ಮೇ.28: ಗುರು ಶಿಷ್ಯರ ಸಂಬಂಧ ಬಹಳ ಪವಿತ್ರವಾದದ್ದು. ನಮ್ಮ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡಿರುವುದು ಸಂತಸ ತಂದಿದೆ, ಎಂದು ಶಿಕ್ಷಕ ಸುಭಾಷ ಗಂಗಾ ನುಡಿದರು.
ತಾಲ್ಲೂಕಿನ ಹಳ್ಳಿಖೇಡ (ಬಿ)ನ್ ಬಸವತೀರ್ಥ ವಿದ್ಯಾಪೀಠ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 2000 ಸಾಲಿನ ವಿದ್ಯಾರ್ಥಿಗಳಿಂದ ಈಚೆಗೆ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವತೀರ್ಥ ವಿದ್ಯಾಪೀಠ ಶಾಲೆಯ ಆಡಳಿತಾಧಿಕಾರಿ ಗುಂಡಯ್ಯ ತೀರ್ಥ ಅವರು ಮಾತನಾಡಿ, ನಾವು ಕಲಿಸಿದ ವಿದ್ಯಾರ್ಥಿಗಳು ಸಮಾಜದ ವಿವಿಧ ರಂಗಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದೀರಿ. ಇದರಿಂದ ನಮ್ಮ ಜೀವನ ಸಾರ್ಥಕವೆನಿಸುತ್ತಿದೆ, ಎಂದು ಸಂತಸ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ ಸುಂದರರಾಜ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಕಲಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗಿಂತ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು ಕೂಡ ಅವರನ್ನು ಮರೆಯದೆ ಸನ್ಮಾನಿಸುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯವಾಗಿದೆ, ಎಂದು ಹರ್ಷ ವ್ಯಕ್ತಪಡಿಸಿದರು. ಶಿಕ್ಷಕರಾದ ಮಧುಕರ ದೇಶಪಾಂಡೆ, ಶಿವಶಂಕರ ಬೇಟಗೇರಿ, ವಿದ್ಯಾವತಿ ತೀರ್ಥಾ, ಶೋಭಾವತಿ, ದಿನೇಶ ಮಾತನಾಡಿದರು. ಹಳೆ ವಿಧ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮೊದಲಿಗೆ ವಿಜಯಲಕ್ಷ್ಮೀ, ಅಂಬಿಕಾ, ರಾಜೇಶ್ವರಿ, ಶಿಲ್ಪಾ ಸಂಗಡಿಗರು ಸ್ವಾಗತ ಗೀತೆ ಹಾಡಿದರು.


























