ಗೂಂಡಾಗಿರಿ, ಕರಾಳ ದಿನ: ಅಶೋಕ್

ಬೆಂಗಳೂರು, ಜ. ೨೨- ಸದನದಲ್ಲಿ ರಾಜ್ಯಪಾಲರನ್ನು ತಡೆದು ಅಗೌರವ ತೋರಿ ಗುಂಡಾಗಿರಿ ನಡೆಸಲಾಗಿದೆ. ಇದೊಂದು ಕರಾಳ ದಿನ ಎಂದು ಬಿಜೆಪಿ ಟೀಕಿಸಿದೆ.
ವಿಧಾನಸಭೆಯ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಭಾಷಣ ಮುಗಿಸಿ ಹೊರಟ ರಾಜ್ಯಪಾಲರನ್ನು ಕಾಂಗ್ರೆಸ್ ಸದಸ್ಯರು ಅಡ್ಡಗಟ್ಟಿರುವುದು ಖಂಡನೀಯ. ಇದೊಂದು ಕರಾಳ ದಿನ ಎಂದು ಬಣ್ಣಿಸಿದರು.


ಸಂವಿಧಾನದ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಎಲ್ಲರಿಗೂ ಧನ್ಯವಾದ ಹೇಳಿ ಹೊರಟಿದ್ದಾರೆ. ಇದರಲ್ಲಿ ತಪ್ಪೇನಿದೆ. ರಾಜ್ಯಪಾಲರಿಗೆ ಭಾಷಣವನ್ನು ಓದದೆ ಸದನದಿಂದ ನಿರ್ಗಮಿಸುವ ಅಧಿಕಾರ ಇದೆ ಎಂದು ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್‌ನವರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿದ್ದು ಗುಂಡಾಗಿರಿ ಎಂದು ಅವರು ಕಿಡಿಕಾರಿದರು.


ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿದ ಸದಸ್ಯರನ್ನು ಸದನದಿಂದ ಹೊರ ಹಾಕಿ ಎಂದು ಆಗ್ರಹಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಸಂಬಂಧ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ದೂರು ನೀಡುತ್ತೇವೆ ಎಂದು ಹೇಳಿದರು.


ರಾಜ್ಯಪಾಲರನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಡೆಯನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜ್ಯಪಾಲರು ಸರ್ಕಾರದ ಹಲವು ಮಸೂದೆಗಳಿಗೆ ಸಹಿ ಹಾಕಿದ್ದಾರೆ. ಆಗ ರಾಜ್ಯಪಾಲರು ಸರಿ ಇದ್ದರಾ ಎಂದು ಪ್ರಶ್ನಿಸಿದರು.


ಲೋಕಭವನವನ್ನು ಕಾಂಗ್ರೆಸ್ ಭವನವನ್ನಾಗಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದರು.
ಕಾಂಗ್ರೆಸ್ ವರಿಷ್ಠರಾದ ರಾಹುಲ್‌ಗಾಂಧಿ ಮತ್ತು ಸೋನಿಯಾಗಾಂಧಿ ಅವರನ್ನು ಮೆಚ್ಚಿಸಲು ಕಾಂಗ್ರೆಸ್‌ನವರು ಸದನದಲ್ಲಿ ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿದ್ದಾರೆ ಎಂದು ಅಶೋಕ್ ದೂರಿದರು.


ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಬಳಸಿರುವುದು ಸಂಪೂರ್ಣವಾಗಿ ಸಂವಿಧಾನ ಸಮ್ಮತ ಇದನ್ನು ಪ್ರಶ್ನಿಸುವ ಕಾಂಗ್ರೆಸ್ ಸರ್ಕಾರ ಮೊದಲು ಸಂವಿಧಾನ ಓದಲಿ, ಅರ್ಥಮಾಡಿಕೊಳ್ಳಲಿ ಎಂದು ಹೇಳಿದರು.