Home ಜಿಲ್ಲೆ ಕಲಬುರಗಿ ಫೆ.24ಕ್ಕೆ ಗುಲಬರ್ಗಾ ವಿ.ವಿ. 43ನೇ ಘಟಿಕೋತ್ಸವ:ಪಿ.ಜಿ.ಆರ್.ಸಿಂಧ್ಯಾ, ಮುರುಗೇಶ ನಿರಾಣಿ, ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಗೌರವ ಡಾಕ್ಟರೇಟ್...

ಫೆ.24ಕ್ಕೆ ಗುಲಬರ್ಗಾ ವಿ.ವಿ. 43ನೇ ಘಟಿಕೋತ್ಸವ:ಪಿ.ಜಿ.ಆರ್.ಸಿಂಧ್ಯಾ, ಮುರುಗೇಶ ನಿರಾಣಿ, ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ: ಶಶಿಕಾಂತ್ ಎಸ್. ಉಡಿಕೇರಿ

ಕಲಬುರಗಿ,ಫೆ.20: ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ವಾರ್ಷಿಕ ಘಟಿಕೋತ್ಸ ಕಾರ್ಯಕ್ರಮವು ಜ್ಞಾನಗಂಗಾ ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಇದೇ ಫೆ.24 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಿದ್ದು, ಮೂವರು ಸಾಧಕರಿಗೆ ಈ ಬಾರಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ್ ಎಸ್. ಉಡಿಕೇರಿ ತಿಳಿಸಿದರು.
ಗುರುವಾರ ವಿಶ್ವವಿದ್ಯಾಲಯದ ಕೈಲಾಶ ಭವನ ಅತಿಥಿಗೃಹದಲ್ಲಿ ಕರೆಯಲಾದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸಾಧನೆಗೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಸಾಮಾಜಿಕ ಸೇವೆ ಪರಿಗಣಿಸಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದರು.
ರಾಜ್ಯದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಗಣ್ಯರಿಗೆ ಗೌರವ ಡಾಕ್ಟರೇಟ್ ಮತು ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯಗಳ ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಪುಣೆಯ ಉನ್ನತ ರಕ್ಷಣಾ ತಂತ್ರಜ್ಞಾನ ಸಂಸ್ಥೆ (ಡೀಮ್ಡ್ ವಿಶ್ವವಿದ್ಯಾಲಯ)ಯ ವಿಶ್ರಾಂತ ಕುಲಪತಿ ಪೆÇ್ರ. ಎಲ್.ಎಂ. ಪಟ್ನಾಯಕ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
2023-24ನೇ ಸಾಲಿಗೆ ಸಂಬಂಧಿಸಿದ 43ನೇ ಘಟಿಕೋತ್ಸವ ಯಶಸ್ವಿಗೆ ಈಗಾಗಲೆ 16 ಉಪ ಸಮಿತಿಗಳನ್ನು ರಚಿಸಿದ್ದು, ಸಕಲ ಸಿದ್ಧತೆ ಪ್ರಕ್ರಿಯೆ ನಡೆದಿವೆ. 43ನೇ ಘಟಿಕೋತ್ಸವ ಈ ಹಿಂದೆಯೆ ಆಗಬೇಕಿತ್ತು. ಕಾರಣಾಂತರದಿಂದ ವಿಳಂಬವಾಗಿದ್ದು, ಇದು ಪೂರ್ಣಗೊಂಡ ನಂತರ ಶೀಘ್ರವೇ 2024-25ನೇ ಸಾಲಿಗೆ ಸಂಬಂಧಿಸಿದ 44ನೇ ಘಟಿಕೋತ್ಸವ ಸಹ ನಡೆಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಕುಲಪತಿ ಪೆÇ್ರ. ಶಶಿಕಾಂತ ಎಸ್. ಉಡಿಕೇರಿ ಉತ್ತರಿಸಿದರು.
77 ವಿದ್ಯಾರ್ಥಿಗಳಿಗೆ 172 ಚಿನ್ನದ ಪದಕ:43ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ಪದವಿ ಕೋರ್ಸುಗಳಿಗೆ 24 ಹಾಗೂ ವಿವಿಧ ಸ್ನಾತಕೋತ್ತರ ಕೋರ್ಸುಗಳಿಗೆ 148 ಸೇರಿ ಒಟ್ಟಾರೆ 172 ಚಿನ್ನದ ಪದಕಗಳನ್ನು 58 ಮಹಿಳಾ ವಿದ್ಯಾರ್ಥಿಗಳು ಹಾಗೂ 19 ಪುರುಷ ವಿದ್ಯಾರ್ಥಿಗಳು ಸೇರಿದಂತೆ 77 ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಇನ್ನುಳಿದಂತೆ 9 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ಮಹಿಳಾ ವಿದ್ಯಾರ್ಥಿಗಳು ಮತ್ತು 5 ಪುರುಷ ವಿದ್ಯಾರ್ಥಿಗಳು ಸೇರಿ 19 ವಿದ್ಯಾರ್ಥಿಗಳಿಗೆ ನೀಡಲಾಗುವುದು.
ಚಿನ್ನದ ಪದಕ ವಿಜೇತರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಕು. ಚನ್ನಮ್ಮ ಇವರು ಅತಿ ಹೆಚ್ಚು 11 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಪ್ರಾಣಿಶಾಸ್ತ್ರ ವಿಭಾಗದ ಕು. ರಾಹುಲ್ ಇವರು 9, ಎಂಬಿಎ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಕು. ಸುರೇಖಾ 8, ರಾಜ್ಯಶಾಸ್ತ್ರ ವಿಷಯದಲ್ಲಿ ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕು. ಶಮೀಮ ರಫತ್ 6, ಸಮಾಜ ಕಾರ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಕು. ದೀಪಾ 6, ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಸುಬೀಯಾ ನೂರೈನ್ 5, ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಕು. ಪ್ರಿಯಾಂಕಾ ರಾಠೋಡ್ 5, ಜೀವ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಕು. ಶಶಿಕುಮಾರ್ 5 ಹಾಗೂ ಕಲಬುರಗಿ ನಗರದ ಗುರುಕುಲ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು. ಪ್ರೀತಿ ಜಿ. ಖೇಮ್ಕರ್ ಅವರು ಬಿಕಾಂ ಕೋರ್ಸಿನಲ್ಲಿ 5 ಚಿನ್ನದ ಪದಕ ಪಡೆಯಲಿದ್ದಾರೆ ಎಂದು ಕುಲಪತಿಗಳು 5 ಮತ್ತು 5ಕ್ಕಿಂತ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ವಿವರ ನೀಡಿದರು.

123 ಅಭ್ಯರ್ಥಿಗಳಿಗೆ ಪಿ.ಎಚ್.ಡಿ. ಪದವಿ:43ನೇ ಘಟಿಕೋತ್ಸವದಲ್ಲಿ ವಿವಿಧ ನಿಕಾಯಗಳಲ್ಲಿ ಒಟ್ಟು 123 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುತ್ತಿದೆ. ಕಲಾ ನಿಕಾಯದಲ್ಲಿ 30, ಸಮಾಜ ವಿಜ್ಞಾನ ನಿಕಾಯದಲ್ಲಿ 26, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ 47, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದಲ್ಲಿ 9, ಶಿಕ್ಷಣ ನಿಕಾಯದಲ್ಲಿ 7 ಹಾಗೂ ಕಾನೂನು ನಿಕಾಯದಲ್ಲಿ 4 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆಯಾಗಿ 62 ಪುರುಷ ಹಾಗೂ 61 ಮಹಿಳಾ ಸಂಶೋಧನಾ ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆಯಲಿದ್ದಾರೆ.
19,133 ಅಭ್ಯರ್ಥಿಗಳಿಗೆ ಪದವಿ ಪ್ರದಾನ:ಪದವಿ ಕೋರ್ಸಿನಲ್ಲಿ 15,504, ಸ್ನಾತಕೋತ್ತರ ಕೋಸ್ರ್ನಲ್ಲಿ 3,462, ಪಿ.ಜಿ. ಡಿಪೆÇ್ಲಮಾ ಕೋರ್ಸಿನಲ್ಲಿ 44 ಹಾಗೂ ಪಿ.ಎಚ್.ಡಿ. ಪದವಿ 123 ಸೇರಿದಂತೆ ಒಟ್ಟಾರೆ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ 19,133 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ. ಇದರಲ್ಲಿ 10,463 ಪುರುಷ ಹಾಗೂ 8,670 ಮಹಿಳಾ ವಿದ್ಯಾರ್ಥಿಗಳು ಸೇರಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಕುಲಸಚಿವ ಪೆÇ್ರ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ ಇದ್ದರು.