
ಬೀದರ್: ನಗರದ ರಾಷ್ಟ್ರೀಯ ಆಂಗ್ಲ ಮಾಧ್ಯಮ ಸಾರ್ವಜನಿಕ ಶಾಲೆ ಹಾಗೂ ಸೈನಿಕ ಶಾಲೆಯಲ್ಲಿ ಭಾರತೀಯ ವಾಯುಪಡೆಯಲ್ಲಿನ ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಜಿಷು ಜೋಸೆಫ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವಾಯುಪಡೆಯಲ್ಲಿ ತಮ್ಮ ೧೩ ವರ್ಷಗಳ ಸೇವಾ ಅನುಭವವನ್ನು ಹಂಚಿಕೊAಡರು. ದೇಶಸೇವೆಯ ಮಹತ್ವ, ವಾಯುಪಡೆಯಲ್ಲಿ ಲಭ್ಯವಿರುವ ವಿವಿಧ ವೃತ್ತಿ ಅವಕಾಶಗಳು, ಸೇನಾ ಜೀವನಕ್ಕೆ ಅಗತ್ಯವಾದ ಶಿಸ್ತು, ನಾಯಕತ್ವ, ಆತ್ಮವಿಶ್ವಾಸ ಹಾಗೂ ಸಮರ್ಪಣಾ ಮನೋಭಾವದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ವಾಯುಪಡೆ ಜಾಗೃತಿ ವಾಹನ ವಿದ್ಯಾರ್ಥಿಗಳ ಗಮನ ಸೆಳೆಯಿತು. ವಾಹನದಲ್ಲಿ ಅಳವಡಿಸಲಾಗಿದ್ದ ವಿವಿಧ ಮಾಹಿತಿ ಫಲಕಗಳು ಮತ್ತು ಪ್ರದರ್ಶನಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಅಲ್ಲದೆ, ವಿಮಾನ ಹಾರಾಟದ ಮಾದರಿ ಅನುಭವ ವ್ಯವಸ್ಥೆ ಮೂಲಕ ವಿಮಾನ ಚಾಲನೆಯ ಅನುಭವ ಪಡೆದು, ವಿಮಾನಯಾನ ಕ್ಷೇತ್ರದ ತಂತ್ರಜ್ಞಾನ ಹಾಗೂ ವಾಯುಪಡೆಯ ಕಾರ್ಯವೈಖರಿಯ ಬಗ್ಗೆ ಪ್ರಾಯೋಗಿಕ ಅರಿವು ಹೊಂದಿದರು.
ವಾಯುಪಡೆಯ ಅಧಿಕಾರಿಯೊಂದಿಗೆ ನಡೆದ ನೇರ ಸಂವಾದವು ವಿದ್ಯಾರ್ಥಿಗಳಲ್ಲಿ ದೇಶಸೇವೆಯ ಬಗ್ಗೆ ಆಸಕ್ತಿ ಮೂಡಿಸಿತು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ ವಿ ಬಿ ಕಾಲೇಜಿನ ಸಂಚಾಲಕರು ಆಗಿರುವ ಡಾ.ರಜನೀಸ ವಾಲಿಯವರು ಮಾತನಾಡಿ, ದೊಡ್ಡ ಕನಸು ಕಾಣಬೇಕು, ಉನ್ನತ ಗುರಿ ಹೊಂದಬೇಕು ಹಾಗೂ ಶಿಸ್ತು ಮತ್ತು ಸಮರ್ಪಣಾ ಮನೋಭಾವದೊಂದಿಗೆ ದೇಶಸೇವೆಯ ಹಾದಿಯಲ್ಲಿ ಸಾಗಬೇಕು ಎಂಬ ಸಂದೇಶವನ್ನು ಅವರು ನೀಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವುದರೊಂದಿಗೆ ದೇಶಪ್ರೇಮ, ಶಿಸ್ತು, ಧೈರ್ಯ ಹಾಗೂ ಕರ್ತವ್ಯಪ್ರಜ್ಞೆಯ ಮಹತ್ವವನ್ನು ಮನದಟ್ಟು ಮಾಡುವ ಸ್ಫೂರ್ತಿದಾಯಕ ವೇದಿಕೆಯಾಗಿ ಪರಿಣಮಿಸಿತು.































