ಜಿಟಿಡಿ ದಲಿತ ವಿರೋಧ ನೀತಿಗೆ ಖಂಡನೆ

ಬಂಗಾರಪೇಟೆ:,ಆ,೨೨- ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನದಲ್ಲಿ ಸಹಕಾರ ಕ್ಷೇತ್ರದಲ್ಲಿ ಎಸ್ಸಿ-ಎಸ್ಟಿಗಳ ಮೀಸಲಾತಿಯನ್ನು ಜಾರಿಗೆ ತರುವ ವಿಷಯದಲ್ಲಿ ತಕರಾರು ತಂದು ದಲಿತ ವಿರೋಧಿ ನೀತಿಯನ್ನು ಅನುಸರಿಸಿದ ಜಿ.ಟಿ.ದೇವೆಗೌಡನನ್ನು ಈ ಕೂಡಲೇ ಪಕ್ಷದಿಂದ ವಜಾ ಮಾಡಿ ಈತನ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕರ್ನಾಟಕ ದಲಿತ ರೈತಸೇನೆ ಅಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ಆಗ್ರಹಿಸಿದರು.


ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ದಿಗೆ ಸಹಕಾರ ಕ್ಷೇತ್ರಗಳಲ್ಲೂ ಸಹ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಅಧಿಕಾರವನ್ನು ಪಡೆದುಕೊಂಡು ಸಮಸಮಾಜದ ಸಮಾನತೆಗಾಗಿ ಎಲ್ಲರೂ ಸಂವಿಧಾನವಾಗಿ ಹಕ್ಕನ್ನು ಪಡೆಯುವಂತೆ ಈ ವಿಷಯವನ್ನು ಮಂಡಿಸಿದ್ದು, ಇದಕ್ಕೆ ವಿರೋಧವಾಗಿ ಎಸ್ಸಿ-ಎಸ್ಟಿ ಸಮುದಾಯದವರು ಬಂದರೆ ಸಹಕಾರ ಕ್ಷೇತ್ರವನ್ನು ಮುಚ್ಚಿಬಿಡಬೇಕೆಂದು ದಲಿತರ ಹಕ್ಕುಗಳಿಗೆ ಚ್ಯುತಿ ತಂದಿರುತ್ತಾರೆ. ಹಾಗೂ ಸಂವಿಧಾನದ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಶಿಕ್ಷಣ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಇವರು, ಸಮಾನತೆ ಮತ್ತು ಸೌಹಾರ್ದತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಬೇಕಾಗಿರುತ್ತದೆ. ಆದರೆ ಜಾತಿ ಜಾತಿ ಮದ್ಯೆ ವಿಷಬೀಜವನ್ನು ಬಿತ್ತುತ್ತಾ, ಅಸ್ಪೃಶ್ಯರನ್ನು ಇನ್ನು ಕೆಳಮಟ್ಟಕ್ಕೆ ತಳ್ಳುವ ದುರುದ್ದೇಶದಿಂದ ದಲಿತರನ್ನು ಸಹಕಾರ ಕ್ಷೇತ್ರಕ್ಕೆ ಅವಕಾಶ ಕೊಡದಂತೆ ತಡೆಯೊಡ್ಡಿದ್ದಾರೆ ಎಂದರು.


ಬಾಬಾ ಸಾಹೇಬ್ ಅಂಬೇಡ್ಕರ್‌ರವರು ನೀಡಿರುವ ಸಂವಿಧಾನದ ಆಶಯದಂತೆ ೭ನೇ ತರಗತಿ ವ್ಯಾಸಂಗ ಮಾಡಿರುವ ಜಿ.ಟಿ.ದೇವೆಗೌಡರನ್ನು ಶಾಸಕರಾಗಿ-ಶಿಕ್ಷಣ ಮಂತ್ರಿಗಳನ್ನಾಗಿ ಮಾಡಿದ್ದು, ಸಂವಿಧಾನವೇ ಹೊರತು, ಬೇರೆ ಯಾವ ಗ್ರಂಥವೂ ಅಲ್ಲ, ಸಂವಿಧಾನದ ಮೂಲ ಉದ್ದೇಶವನ್ನು ಗಾಳಿಗೆ ದೂಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅಧಿಕಾರ ವಂಚಿತರಾಗಬೇಕು, ಸಮಾನತೆ ಸಿಗದಂತಾಗಬೇಕು, ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದುವರೆಯಬಾರದೆಂಬ ಆಲೋಚನೆಯಿಂದ ಪರಿಶಿಷ್ಟರಿಗೆ ಮತ್ತು ಪರಿಶಿಷ್ಟ ಪಂಗಡಕ್ಕೆ ಸಹಕಾರ ಕ್ಷೇತ್ರದಲ್ಲಿ ಅವಕಾಶ ನೀಡಬಾರದೆಂದು ವಿರೋಧಿಸಿರುವ ಅವೈಜ್ಞಾನಿ, ಮಾನಸಿಕ ಅಸ್ವಸ್ಥ, ದಲಿತ ವಿರೋಧಿ, ಜಿ.ಟಿ.ದೇವೆಗೌಡ ಅವರ ವಿರುದ್ದ ಎಸ್ಸಿ-ಎಸ್ಟಿ ಹಕ್ಕುಗಳ ಉಲ್ಲಂಘನೆ ಕಾಯ್ದೆಯಲ್ಲಿ ಕೇಸು ದಾಖಲಿಸಿ ಇವರನ್ನು ಬಂಧಿಸಿ, ಇವರಿಂದ ಶಾಸಕತ್ವದ ರಾಜಿನಾಮೆ ಪಡೆದು ಪಕ್ಷದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.