
ಸಂಜೆವಾಣಿ ವಾರ್ತೆ,
ವಿಜಯಪುರ ಮಾ.೨: ನಗರದ ಹೊರವಲಯದ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಸಾಮಾಜಿಕ ಅರಣ್ಯ ವಿಭಾಗದ ರೈತ ತರಬೇತಿ ಕೇಂದ್ರದಲ್ಲಿ ರೈತರಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರುದ್ರಪ್ಪ ಕಬಾಡಗಿ ಮಾತನಾಡಿ, ಜಿಲ್ಲೆಯಲ್ಲಿ ಶೇಕಡಾವಾರು ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ರೈತರು ಕೃಷಿ ಬೆಳೆಗಳ ಜೊತೆಗೆ ಇಲಾಖೆಯಿಂದ ನೀಡಲಾಗುವ ಅರಣ್ಯ ಗಿಡಗಳನ್ನು ಬೆಳೆಸಬೇಕು. ಇದಕ್ಕೆ ಸರ್ಕಾರದಿಂದ ಸೌಲಭ್ಯಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಅರಣ್ಯ ಪ್ರದೇಶವನ್ನು ಹೆಚ್ಚಿಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪ್ರಾದೇಶಿಕ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ ಮಾತನಾಡಿ, ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಸರ್ಕಾರವು ಗಿಡಮರಗಳನ್ನು ನೆಟ್ಟು ಸಂರಕ್ಷಿಸಲಾಗುತ್ತಿದೆ. ರೈತರಿಗೆ ಗಿಡ ಮರಗಳನ್ನು ಬೆಳೆಯಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪನ್ಯಾಸ ನೀಡಿ, ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಅರಣ್ಯ ಮರಗಳ ಮಧ್ಯದಲ್ಲಿ ಕೃಷಿ ಬೆಳೆಗಳು, ತೋಟಗಾರಿಕೆ ಬೆಳೆಗಳು, ಹುಲ್ಲುಗಾವಲು, ಮತ್ತು ಇತರೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕೆಂದರು.
ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ. ಬಿ.ಎಮ್.ಪಾಟೀಲ್ ಗುರೂಜಿ, ರೈತರು ಹಣ್ಣಿನ ಗಿಡ ಮರಗಳನ್ನು ಬೆಳೆಯಬೇಕು. ಸತ್ವಯುತ ಆಹಾರ ಸೇವಿಸಬೇಕು. ಆರೋಗ್ಯ ಕಾಪಾಡಿಕೊಳ್ಳಲು ಯೋಗ, ಧ್ಯಾನ, ಪ್ರಾಣಾಯಾಮವನ್ನು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಪ್ರಗತಿಪರ ರೈತ ಚಂದ್ರಶೇಖರ ಪಾಸೋಡಿ, ತಾವು ಅರಣ್ಯ ಗಿಡಗಳ ಮಧ್ಯೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ಲಾಭಗಳಿಸಿದ್ದಾಗಿ ತಿಳಿಸಿದರು. ದಾಂಡೇಲಿಯ ವೆಸ್ಟ್ ಕೋಸ್ಟ್, ಪೇಪರ ಮಿಲ್ ನ ರವೀಂದ್ರನಾಥ್ ಠಾಕೂರ್ ಅರಣ್ಯ ಬೆಳೆಗಳ ಮಾರುಕಟ್ಟೆ ಬಗ್ಗೆ ಉಪನ್ಯಾಸ ನೀಡಿದರು.
ವಲಯ ಅರಣ್ಯಾಧಿಕಾರಿ ಎಸ್.ಜಿ. ಸಂಗಾಲಕ್, ಗಿರೀಶ್ ಹಲ್ಕುಡೆ, ಅರಣ್ಯ ಬೆಳೆಗಳನ್ನು ಬೆಳೆಯುವುದರಿಂದ ರೈತರ ನಿರಂತರ ಆದಾಯ ಹೆಚ್ಚಿಸುವ ಕುರಿತಂತೆ ಉಪನ್ಯಾಸ ನೀಡುವುದರ ಜೊತೆಗೆ ಇಲಾಖಾ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊAಡರು.
ಇದೇ ಸಂದರ್ಭದಲ್ಲಿ ಅರಣ್ಯ ಮರಗಳನ್ನು ಬೆಳೆಸಿದ ಜಿಲ್ಲೆಯ ರೈತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ರೈತ ಬಾಂಧವರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವಲಯ ಅರಣ್ಯ ಅಧಿಕಾರಿಗಳು ಪ್ರಾದೇಶಿಕ ಮತ್ತು ಸಾಮಾಜಿಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



























