
ಕೆ.ಆರ್.ಪುರ,ಜು.೮– ಮಹದೇವಪುರ ಕ್ಷೇತ್ರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ಭವಿಷ್ಯದ ವಾಹನ ಸಂಚಾರ ಹಾಗೂ ಜನಸಂಖ್ಯೆಯ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಯೋಜಿತ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಗುಂಜೂರು ಮುಖ್ಯರಸ್ತೆ (ರಾಜ್ಯ ಹೆದ್ದಾರಿ-೩೫) ಯಿಂದ ಪೆರಿಫೆರಲ್ ರಿಂಗ್ ರಸ್ತೆ ಸಂಪರ್ಕಿಸುವ ೪೫ ಮೀಟರ್ ಅಗಲದ ಸಿಡಿಪಿ ರಸ್ತೆ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ಷೇತ್ರದ ಜನರಿಗೆ ಉತ್ತಮ ರಸ್ತೆ ಸಂಪರ್ಕ ಹಾಗೂ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗುಂಜೂರು ಮುಖ್ಯರಸ್ತೆಯಿಂದ ಪಿಆರ್‌ಆರ್‌ಗೆ ಸಂಪರ್ಕ ಕಲ್ಪಿಸುವ ೪೫ ಮೀಟರ್ ಸಿಡಿಪಿ ರಸ್ತೆ ನಿರ್ಮಾಣವು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಸಂಚಾರ ದಟ್ಟಣೆ ಕಡಿಮೆಯಾಗಿ ಸಾವಿರಾರು ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಈಗ ಕೈಗೋಂಡಿರುವ ರಸ್ತೆ ಕಾಮಗಾರಿಗಳಿಂದ ಗುಂಜೂರು, ವರ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಣೆಗೊಳ್ಳಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಎಲ್. ರಾಜೇಶ್, ಮುಖಂಡರಾದ ಸುರೇಶ್ ರೆಡ್ಡಿ, ಸೋಮಶೇಖರ ರೆಡ್ಡಿ, ಅಸ್ಲಾಂ ಪಾಷ, ಲಕ್ಷ್ಮೀನಾರಾಯಣ, ಅರವಿಂದ್ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.

































