ಗಣೇಶ ಆಚರಣೆಗೆ ಹೆಚ್ಚಿನ ಮಹತ್ವ: ಸಿದ್ದರಬೆಟ್ಟಶ್ರೀ

ಮಧುಗಿರಿ, ಆ. ೨೯- ಎಲ್ಲರೂ ಗಣಪತಿಯನ್ನು ನಿತ್ಯವೂ ಪೂಜೆ ಮಾಡುತ್ತಾರೆ. ಆದರೆ ಭಾದ್ರಪ್ರದ ಮಾಸದಲ್ಲಿ ಪ್ರತಿಷ್ಠಾಪಿಸುವಂತಹ ಗಣಪತಿಗೆ ಹೆಚ್ಚು ಮಹತ್ವ ಮತ್ತು ಶಕ್ತಿ ಇರಲಿದ್ದು, ಎಲ್ಲರ ಇಷ್ಟಾರ್ಥಗಳನ್ನು ಗಣಪತಿಯು ಈಡೇರಿಸುತ್ತಾನೆ ಎನ್ನುವ ಪ್ರತೀತಿ ಇದೆ ಎಂದು ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಮಧ್ಯಭಾಗದಲ್ಲಿ ಶ್ರೀ ವಿದ್ಯಾ ಗಣಪತಿ ಮಹಾಮಂಡಳಿ ವತಿಯಿಂದ ಬಾಲಗಂಗಾಧರ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ವಿದ್ಯಾ ಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಅರ್ಶಿವಚನ ನೀಡಿದ ಅವರು, ಕಳೆದ ೧೮ ವರ್ಷಗಳಿಂದ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಹಾಗೂ ಕೋಮು ಸೌಹಾರ್ದ ಸಂಕೇತವಾಗಿ ಈ ಗಣೇಶ ಆಚರಣೆ ನಡೆಯುತ್ತಿರುವುದು ಉತ್ತಮವಾದ ನಡೆ ಎಂದರು.
ಈ ವಿದ್ಯಾ ಗಣಪತಿಯನ್ನು ಹರಿಹರ ಸಂಗಮದ ಮಧ್ಯಭಾಗದ ಹಾಗೂ ಎದುರುಗಡೆ ಇರುವ ಅಶ್ವತ್ಥ್ ನಾರಾಯಣ ಪವಿತ್ರವಾದ ಸ್ಥಳದಲ್ಲಿ ಸ್ಥಾಪಿಸಿರುವುದು ಲೋಕಕಲ್ಯಾಣಾರ್ಥ ಉತ್ತಮ ಕೆಲಸವೆಂದು ತಿಳಿಸಿದರು.


ಪುರಸಭಾಧ್ಯಕ್ಷ ಹಾಗೂ ಶ್ರೀ ವಿದ್ಯಾಗಣಪತಿ ಮಹಾ ಮಂಡಳಿ ಅಧ್ಯಕ್ಷ ಜಿ.ಎ ಮಂಜುನಾಥ್ ಲಾಲಪೇಟೆ ಮಾತನಾಡಿ, ಹಲವಾರು ವರ್ಷಗಳಿಂದ ಬಹು ಭಕ್ಷರ ಬೇಡಿಕೆಯಾಗಿದ್ದ ಶ್ರೀ ವಿದ್ಯಾ ಗಣಪತಿಯ ಶಾಶ್ವತ ಪೆಂಡಾಲ್ ನಿರ್ಮಾಣಕ್ಕೆ ಶಾಸಕ ಕೆ .ಎನ್. ರಾಜಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ ತ್ವರಿತವಾಗಿ ಕೆಲಸ ಮಾಡಿ ಕೊಟ್ಟಿರುವುದರಿಂದ ಮಧುಗಿರಿಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


ತುಮಕೂರು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಡಾ. ಎಂ. ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಜತೆಗೆ ಲೋಕಕಲ್ಯಾಣಾರ್ಥ ಶ್ರೀ ವಿದ್ಯಾ ಗಣಪತಿಯಲ್ಲಿ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪವಿಭಾಗಾಧಿ ಕಾರಿ ಗೊಟೂರು ಶಿವಪ್ಪ, ಬಿಇಒ ಹನುಮಂತ ರಾಯಪ್ಪ, ಸಿಪಿಐ ಹನುಮಂತರಾಯಪ್ಪ, ಪಿಎಸ್‌ಐ ಮುತ್ತುರಾಜ್, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಡಿ.ಜಿ,ಶಂಕರ ನಾರಾಯಣ ಶೆಟ್ಟಿ, ಎಂ.ಕೆ.ನಂಜುಂಡಯ್ಯ,ಎಂ.ವಿ.ಗೋವಿಂದರಾಜು, ತಿಮ್ಮರಾಯಪ್ಪ, ಸದಸ್ಯರುಗಳಾದ ಅಲಿಂ ,ಎಂ.ಶ್ರಿದರ್ ಕೆ. ನಾರಾಯಣ್, ಮಂಜುನಾಥ್ ಆಚಾರ್, ಮತ್ತಿತರರು ಭಾಗವಹಿಸಿದ್ದರು.