Home ಜಿಲ್ಲೆ ಜಮಖಂಡಿಯಲ್ಲಿ ರಂಭಾಪುರಿ ಜಗದ್ಗುರುಗಳ ಭವ್ಯ ಸ್ವಾಗತ ಮೆರವಣಿಗೆ

ಜಮಖಂಡಿಯಲ್ಲಿ ರಂಭಾಪುರಿ ಜಗದ್ಗುರುಗಳ ಭವ್ಯ ಸ್ವಾಗತ ಮೆರವಣಿಗೆ

ಜಮಖಂಡಿ: ನಗರದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಅಂಗವಾಗಿ, ಜಗದ್ಗುರುಗಳ ಭವ್ಯ ಸ್ವಾಗತ ಮೆರವಣಿಗೆ ಶನಿವಾರ ಸಂಜೆ ಅದ್ಧೂರಿಯಾಗಿ ಜರುಗಿತು.

ಸಾವಿರಾರು ಮುತ್ತೈದೆಯರು ಪೂರ್ಣಕುಂಭ, ಕಳಶ ಹಾಗೂ ಆರತಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡು ಧಾರ್ಮಿಕ ಸಂಭ್ರಮಕ್ಕೆ ಮೆರುಗು ನೀಡಿದರು.

ನಗರದ ಮುಧೋಳ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಸಂಜೆ 5 ಗಂಟೆಗೆ ಆರಂಭಗೊಂಡ ಸ್ವಾಗತ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪೂರ್ಣಕುಂಭ, ಕಳಶ, ಕನ್ನಡಿ ಹಾಗೂ ವಿವಿಧ ವಾದ್ಯ ವೈಭವಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಉತ್ಸಾಹದಿಂದ ಭಾಗವಹಿಸಿದರು.

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳು ತೇರಿನಲ್ಲಿ ಕುಳಿತು ಭಕ್ತರು ಹಾಗೂ ಸಾರ್ವಜನಿಕರಿಗೆ ದರ್ಶನ ನೀಡಿದರು. ಮಾರ್ಗದುದ್ದಕ್ಕೂ ಭಕ್ತರು ಜಗದ್ಗುರುಗಳ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಮೆರವಣಿಗೆಯು ಮೈಗೂರು ರಸ್ತೆಯಲ್ಲಿರುವ ಕಲೂತಿ ಕಲ್ಯಾಣ ಮಂಟಪಕ್ಕೆ ಆಗಮಿಸುವ ಮೂಲಕ ಸಮಾರೋಪಗೊಂಡಿತು.

ಪಂಚಾಚಾರ್ಯ ಧ್ವಜಾರೋಹಣದೊಂದಿಗೆ ಧರ್ಮ ಸಮ್ಮೇಳನಕ್ಕೆ ಸಿದ್ಧತೆ

ಇದಕ್ಕೂ ಮುನ್ನ ಜಮಖಂಡಿ ನಗರದ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ ಕಾರ್ಯಕ್ರಮ ಧಾರ್ಮಿಕ ಸಂಭ್ರಮದಿಂದ ಜರುಗಿತು.

ಜಮಖಂಡಿ ನಗರದ ಕಲ್ಯಾಣಮಠದ ಶ್ರೀ ಷ|| ಬ್ರ|| ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು, ಮುತ್ತಿನಕಂತಿ ಹಿರೇಮಠದ ಶ್ರೀ ಷ|| ಬ್ರ|| ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹಾಗೂ ಕೊಣ್ಣೂರು-ಸಿಂಧಗಿ ಹೊರಗಿನಮಠದ ಶ್ರೀ ಷ|| ಬ್ರ|| ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಶರನ್ನವರಾತ್ರಿ ದಸರಾ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಜಗದೀಶ ಗುಡಗುಂಟಿ ಸೇರಿದಂತೆ ಗಣ್ಯರು ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸಿದರು.

ಅಕ್ಟೋಬರ್ 11ರಿಂದ 21ರವರೆಗೆ ಧಾರ್ಮಿಕ ಕಾರ್ಯಕ್ರಮಗಳು
ಜಮಖಂಡಿಯ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸ್ವಾಗತ ಮೆರವಣಿಗೆಯಲ್ಲಿ ವಿವಿಧ ಮಠಾಧೀಶರು, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ, ಶರನ್ನವರಾತ್ರಿ ದಸರಾ ಮಹೋತ್ಸವ ಸಮಿತಿಯ ಸದಸ್ಯರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.