Home ಜಿಲ್ಲೆ 27ರಂದು ಹುಬ್ಬಳ್ಳಿಯಲ್ಲಿ ರೆಡ್ಡಿ ಸಮಾಜದ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾರಂಭ

27ರಂದು ಹುಬ್ಬಳ್ಳಿಯಲ್ಲಿ ರೆಡ್ಡಿ ಸಮಾಜದ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾರಂಭ

ಯಾದಗಿರಿ: ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾರಂಭವು ಸೆ.27ರಂದು ಹುಬ್ಬಳ್ಳಿಯ ಸತ್ತೂರಿನ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಸಮಾಜದ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜ ಬೆಂಗಳೂರು ಹಾಗೂ ಧಾರವಾಡ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಶಿರಹಟ್ಟಿ ಜಗದ್ಗುರು ಶ್ರೀ ಫಕೀರೇಶ್ವರ ಭಾವೈಕ್ಯತಾ ಪೀಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಸಮಾಜ ಸೇವೆ, ಶಿಕ್ಷಣ, ರಾಜಕೀಯ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ ವಿಧಾನಸಭೆಯ ನೂತನ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ವಿಶೇಷ ಗೌರವ ಸನ್ಮಾನ ನಡೆಯಲಿದೆ.

ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ ಸೇರಿದಂತೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಮಾಜಿ ಸಂಸದ ಆರ್.ಎಸ್. ಪಾಟೀಲ, ಮಾಜಿ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಎ.ಬಿ. ಮಾಲಕರಡ್ಡಿ, ಹೆಚ್. ಏಕಾಂತಯ್ಯ, ಅಜಯಕುಮಾರ್ ಸರನಾಯಕ, ಹಾಲಪ್ಪ ಆಚಾರ್, ವೆಂಕಟರಾವ್ ನಾಡಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ ಹಾಗೂ ರಾಜ್ಯ ನಿರ್ದೇಶಕ ಸಂಗನಗೌಡ ಮಿಥುನ ಜಿ. ಪಾಟೀಲ ಅವರು ಯುವ ನಾಯಕತ್ವವನ್ನು ಪ್ರತಿನಿಧಿಸಲಿದ್ದಾರೆ.

ಕಾರ್ಯಕ್ರಮವು ಕೇವಲ ಅಭಿನಂದನಾ ಸಮಾರಂಭವಾಗಿರದೆ, ರೆಡ್ಡಿ ಸಮುದಾಯದ ಒಗ್ಗಟ್ಟು, ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿಗೆ ವೇದಿಕೆಯಾಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಜಶೇಖರ ಪಾಟೀಲ ವಜ್ಜಲ್ ಮನವಿ ಮಾಡಿದರು.

ಸಮಾಜದ ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ, ಬಾಪುಗೌಡ ಪಾಟೀಲ ಅಗತೀರ್ಥ, ಭೀಮನಗೌಡ ಕ್ಯಾತ್ನಾಳ, ಬಸನಗೌಡ ವಠಾರ ರಾಜನಕೋಳೂರ, ಪ್ರಕಾಶರೆಡ್ಡಿ ಮುದನೂರ, ಸಿದ್ರಾಮರೆಡ್ಡಿ ಕಾಮರೆಡ್ಡಿ, ವಿರುಪಾಕ್ಷಯ್ಯ ಸ್ವಾಮಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.