
ಕೆಂಗೇರಿ, ೧೩.ಅ: ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಮತ್ತಿಕೆರೆ ಹೆಚ್.ಎಂ.ಟಿ.ಲೇಔಟ್ ಗಣೇಶ ಗುಡಿ ಆಟದ ಮೈದಾನದಲ್ಲಿ ಶ್ರೀವೆಂಕಟೇಶ್ವರ ಚಾರಿಟೆಬಲ್ ಟ್ರಸ್ಟ್(ರಿ) ವತಿಯಿಂದ ಹಮ್ಮಿಕೊಂಡಿರುವ ನವರಾತ್ರಿ ಉತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಬೃಹತ್ ವೇದಿಕೆ ನಿರ್ಮಿಸಿ ಮಂಟಪದಲ್ಲಿ ಬೆಂಗಳೂರಿನ ಒಂಬತ್ತು ಶಕ್ತಿ ದೇವತೆಗಳಾದ ಬೆಂಗಳೂರು ನಗರ ದೇವತೆ ಅಣ್ಣಮ್ಮ, ಸರ್ಕಲ್ ಮಾರಮ್ಮ, ಅಂಗಾಳ ಪರಮೇಶ್ವರಿ, ಮಹಾ ಲಕ್ಷ್ಮಿ, ಓಂಶಕ್ತಿಅಮ್ಮ, ವಾರಾಹಿ ಅಮ್ಮ, ಚಾಮುಂಡೇಶ್ವರಿ, ಪ್ಲೇಗಮ್ಮ, ಹುಲಿಯೂರಮ್ಮ ದೇವರ ವಿಗ್ರಹ ಮೂರ್ತಿಗಳನ್ನು ಕರೆತಂದು ಪ್ರತಿಷ್ಠಾಪಿಸಿ ಸಡಗರ, ಸಂಭ್ರಮದಿಂದ ಸಹಸ್ತ್ರಾರು ಭಕ್ತಾಧಿಗಳ ಜಯಘೋಷಣೆಯೊಂದಿಗೆ ೧೦ದಿನಗಳ ನವರಾತ್ರಿ ಉತ್ಸವಕ್ಕೆ ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ, ಕಾರ್ಯಕ್ರಮದ ಪ್ರಾಯೋಜಕ ವೆಂಕಟೇಶಮೂರ್ತಿ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಮತರಾಯಪ್ಪ, ಆಯೋಜಕಿ ಅರ್ಚನವೆಂಕಟೇಶಮೂರ್ತಿ, ಬಿಬಿಎಂಪಿ ಮಾಜಿ ಸದಸ್ಯರಾದ ವೇಲು ನಾಯಕರ್, ಸುರೇಶ್ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಎಂ.ಮಲ್ಲಿಕಾರ್ಜುನ ಅವರು ವಿಶೇಷ ಪೂಜೆ, ಪುರಸ್ಕಾರ, ಹೋಮ, ಹವನಗಳಲ್ಲಿ ಪಾಲ್ಗೊಂಡು ಚಾಲನೆ ನೀಡಿದರು. ಸಹಸ್ರಾರು ಭಕ್ತಾಧಿಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ದಸರಾ ಉತ್ಸವದ ಮಾದರಿಯಲ್ಲಿ ನವರಾತ್ರಿ ಉತ್ಸವವನ್ನು ಆಚರಿಸುತ್ತಿದ್ದು. ಪ್ರತಿದಿನ ನವಶಕ್ತಿ ದೇವತೆಗಳ ಆರಾಧನೆ, ಹೋಮ, ಹವನಗಳು, ಲಲಿತಾ ಸಹಸ್ರನಾಮ, ಸಾಂಸ್ಕೃತಿಕ ಸಂಭ್ರಮ, ದಾಂಡಿಯಾ ಸಂಭ್ರಮ, ಸಂಗೀತ ಸಂಜೆ, ಭಕ್ತಿ ಗೀತೆಗಾಯನ, ಭಗವತ್ ಗೀತೆ, ನಿತ್ಯ ಅನ್ನದಾಸೋಹ ನಡೆಯಲಿದೆ. ಗುಜರಾತ್ ರಾಜ್ಯದವರಿಂದ ಡೋಲು, ಗಾಯನ, ಕೋಲಾಟ ೧೨,೧೩,೧೪ರಂದು ನಡೆಯಲಿದೆ. ೧೫,೧೬ ಸ್ಥಳೀಯ ಶಾಲಾ, ಕಾಲೇಜು, ವಿದ್ಯಾರ್ಥಿಗಳಿಂದ ಸಂಗೀತ, ಭರತನಾಟ್ಯ. ೧೭ರಂದು ಜೀ ಟಿವಿ ಕನ್ನಡದ ಸರಿಗಮಪ ಗಾಯಕರು ,ನಟ ನಟಿಯರಿಂದ ಗಾಯನ, ನೃತ್ಯ ನಡೆಯಲಿದೆ. ೧೮ರಂದು ಸಂಗೀತಸಂಜೆ, ೧೯ರಂದು ವಾರಾಣಾಸಿಯಿಂದ ಪುರೋಹಿತರು, ಪಂಡಿತರಿಂದ ಗಂಗಾರತಿ ನಡೆಯಲಿದ್ದು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವ ಕೃಷ್ಣಬೈರೇಗೌಡ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಭಾಗವಹಿಸುವರು. ೨೦ರಂದು ನವಶಕ್ತಿ ದೇವತೆಗಳ ಮುತ್ತಿನ ಪಲ್ಲಕ್ಕಿ, ಉತ್ಸವ, ವಿವಿಧ ರಾಜ್ಯಗಳ ಜಾನಪದ ಕಲಾ ತಂಡಗಳು(ನೂರು ತಂಡ) ಭವ್ಯ ಮೆರವಣಿಗೆ ಪಾಲ್ಗೊಂಡು ಕಲಾಪ್ರದರ್ಶನ ನಡೆಸಿಕೊಡುತ್ತಾರೆ. ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ನವರಾತ್ರಿ ಉತ್ಸವಕ್ಕೆ ಮೆರಗನ್ನು ನೀಡಲಾಗಿದೆ ಎಂದರು.
ಎಚ್.ಕುಸುಮಾ ಮಾತನಾಡಿ ನವರಾತ್ರಿ ಉತ್ಸವ ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದ್ದು. ದೇವತೆಯರು ನಾಡಿನ ಜನತೆಗೆ ಒಳಿತು, ಆರೋಗ್ಯಭಾಗ್ಯ, ಸಮೃದ್ಧಿ ನೀಡಲಿ ಎಂದು ನಿತ್ಯ ವಿಶೇಷ ಪೂಜೆ, ಹೋಮ, ಹವನಗಳು ನಡೆಯಲಿವೆ. ಯುವ ಸಮೂಹ ದೇವರ ಆರಾಧನೆ, ಸಂಸ್ಕೃತಿ, ಸಂಸ್ಕಾರ ಮತ್ತಷ್ಟು ಗಟ್ಟಿಗೊಳಿಸಲು ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದರು.





















