ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿ ಭವ್ಯ ಉದ್ಘಾಟನೆ

ಬೀದರ್:ಅ.31:2025-26ನೇ ಸಾಲಿನ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿಯು ಬೀದರ್‍ನಲ್ಲಿ ಭವ್ಯವಾಗಿ ಆರಂಭಗೊಂಡಿತು. ಪದವಿ ಪೂರ್ವ ಶಿಕ್ಷಣ ಇಲಾಖೆ, ಬೀದರ್ ಹಾಗೂ ಶಾಹಿನ್ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಎರಡು ದಿನಗಳ ಪಂದ್ಯಾವಳಿಯನ್ನು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಬಾಬು ಹೊನ್ನಾ ನಾಯಕ್ ಉದ್ಘಾಟಿಸಿದರು.

ಉದ್ಘಾಟನಾ ಭಾಷಣದಲ್ಲಿ ಅವರು, “ಸೋಲು ಮತ್ತು ಗೆಲುವು ಎರಡೂ ಸಮಾನ. ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಉತ್ತಮ ಆರೋಗ್ಯ ಇದ್ದರೆ ಉತ್ತಮವಾಗಿ ಓದಬಹುದು. ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ತರುವಂತೆ ಶ್ರಮಿಸಬೇಕು,” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಚಂದ್ರಕಾಂತ್ ಎಂ. ಶಹಾಬಾದ್ಕರ್ ವಹಿಸಿದ್ದರು. ಅವರು “ಕ್ರೀಡಾಪಟುಗಳು ಕ್ರೀಡಾ ನಿಯಮಗಳನ್ನು ಪಾಲಿಸಿಕೊಂಡು ನೈತಿಕವಾಗಿ ಆಟವಾಡಬೇಕು; ಅಂಪೈರ್‍ಗಳು ನಿಷ್ಪಕ್ಷಪಾತ ನಿರ್ಣಯ ನೀಡಿ ಮಕ್ಕಳಿಗೆ ನ್ಯಾಯ ಒದಗಿಸಬೇಕು” ಎಂದು ಕರೆ ನೀಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಬೀದರ್ ಜಿಲ್ಲೆಯ ಕ್ರೀಡಾ ಪರಂಪರೆಗೆ ಇದು ಹೆಮ್ಮೆಯ ಕ್ಷಣವಾಗಿದೆ. ಈ ಕ್ರೀಡೆ ವಿದ್ಯಾರ್ಥಿಗಳಿಗೆ ಮನೋಬಲ ಹೆಚ್ಚಿಸುವುದರ ಜೊತೆಗೆ ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಉತ್ತೇಜಿಸುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಹಸೀಬ್ (ಕಾರ್ಯದರ್ಶಿ, ಶಾಹಿನ್ ಶಿಕ್ಷಣ ಸಮೂಹ ಸಂಸ್ಥೆ), ನಿರ್ದೇಶಕರು ಶಹಿಸ್ತಾ, ಜಕಿಯಾ ಫಾತಿಮಾ, ವಾಫ ಮೇಡಂ, ಅಲ್ಲಂ ಇಕ್ಬಾಲ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಖಾಜಾ ಪಟೇಲ್, ಬೀದರ್ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭು ಎಸ್., ಕಾರ್ಯಾಧ್ಯಕ್ಷ ಡಾ. ಮನ್ಮಥ್ ಡೋಳೆ, ರಾಜ್ಯ ಪ್ರತಿನಿಧಿ ಬಾಲಾಜಿ ವಾಡೇಕರ್, ಉಪನ್ಯಾಸಕರ ಸಂಘದ ಅಧ್ಯಕ್ಷ ಓಂಕಾಂತ ಸೂರ್ಯವಂಶಿ, ಅನುದಾನಿತ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ವಿಜಯಕುಮಾರ್ ಪಾಟೀಲ್ ಹೆಡಗಾಪರ ಹಾಗೂ ಅನೇಕ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕ್ರೀಡೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ದೈಹಿಕ ಉಪನ್ಯಾಸಕರಾದ ಸಂಜಯ್ ಜೆಸ್ಸಿ, ಅಬ್ದುಲ್ ಖಾದರ್, ನಾಗನಾಥ ಬಿರಾದರ್, ಧನರಾಜ ಬಿರಾದರ್, ಬಸವರಾಜ್ ಬಿರಾದರ್, ಅನಿಲ್ ನಾಟಿಕರ್, ಶಿವಶರಣಪ್ಪ ನಾಟಿಕರ್, ಶಿವಶರಣಪ್ಪ ದೇಸಾಯಿ, ಪೂಜಾ ಇಂಗಳೆ, ಕಾಳಿದಾಸ ಬಿರಾದರ್ ಇವರುಗಳು.

ಕ್ರೀಡಾಕೂಟದ ವೀಕ್ಷಕರಾಗಿ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ಬೆಂಗಳೂರು ಕಚೇರಿಯ ಗೋಪಾಲ ಕೃಷ್ಣ ಅವರು ಹಾಜರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಡಾ. ಚಂದ್ರಕಾಂತ ಗಂಗಶೆಟ್ಟಿ ಹಾಗೂ ನಿರೂಪಣೆಯನ್ನು ಪ್ರಾಚಾರ್ಯ ಓಂ ಪ್ರಕಾಶ ದಡ್ಡೆ ಅವರು ನಿರ್ವಹಿಸಿದರು.

ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 33 ಜಿಲ್ಲೆಗಳಿಂದ ವಿದ್ಯಾರ್ಥಿಗಳು ಮತ್ತು 26 ಜಿಲ್ಲೆಗಳಿಂದ ವಿದ್ಯಾರ್ಥಿನಿಯರು ಭಾಗವಹಿಸಿದ್ದು, ಕ್ರೀಡಾಸ್ಪೂರ್ತಿ ಮತ್ತು ರಾಜ್ಯದ ಏಕತೆಯ ಪ್ರತೀಕವಾಗಿ ಕಣ್ತುಂಬಿದ ದೃಶ್ಯ ಮೂಡಿತು.