
ಕುಣಿಗಲ್, ಸೆ. ೨೨- ತಾಲ್ಲೂಕು ವಕೀಲರ ಸಂಘದ ವತಿಯಿಂದ ಗಣೇಶೋತ್ಸವ ಮತ್ತು ಗಣೇಶ ವಿಸರ್ಜನಾ ಕಾರ್ಯಕ್ರಮವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ ಎಂದು ವಕೀಲರ ಸಂಘದ ಕಾರ್ಯದರ್ಶಿ ಅಬ್ದುಲ್ ರಹಮಾನ್ ಹೇಳಿದರು.
ಪಟ್ಟಣದ ವಕೀಲರ ಸಂಘದ ವತಿಯಿಂದ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮ ಹಿಂದೂ- ಮುಸ್ಲಿಂ ಸಮುದಾಯದ ವಕೀಲರು ಹಾಗೂ ಸಾರ್ವಜನಿಕರು ಒಟ್ಟಾಗಿ ನಿಂತು ಅದ್ದೂರಿ ಗಣೇಶ ವಿಸರ್ಜನಾ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು ಎಲ್ಲರನ್ನು ಒಂದುಗೂಡಿಸುತ್ತವೆ. ಧರ್ಮ ಯಾವುದಾದರೂ ಏನು ಸಾರ್ವಜನಿಕರ ಸೇವೆ ಮುಖ್ಯ. ವಕೀಲರ ವೃತ್ತಿಯ ನಡುವೆ ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಂಡ ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಸಂತೋಷ ತಂದಿದೆ. ಕುಣಿಗಲ್ ಸದಾ ಶಾಂತಿ ಮತ್ತು ಸಹಬಾಳ್ವೆಗೆ ಹೆಸರಾದ ಊರು. ಈ ಗಣೇಶ ವಿಸರ್ಜನಾ ಮಹೋತ್ಸವವು ಸಾರ್ವಜನಿಕರೆಲ್ಲರ ಸಹಕಾರದೊಂದಿಗೆ ಅತ್ಯಂತ ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ನಡೆಯಿತು ಎಂದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು, ವಕೀಲರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಡ್ಯಾನ್ಸ್ ಮಾಡುವ ಮೂಲಕ ಹೆಜ್ಜೆ ಹಾಕಿದರು, ವಿವಿಧ ಜಾನಪದ ಕಲಾತಂಡಗಳು ಮತ್ತು ಮ್ಯೂಸಿಕ್ ಬ್ಯಾಂಡ್ಗಳ ಅದ್ದೂರಿ ಮೆರವಣಿಗೆಯೊಂದಿಗೆ ಗಣೇಶಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಉದ್ದಕ್ಕೂ ಮುಸ್ಲಿಂ ಬಾಂಧವರು ಗಣೇಶನಿಗೆ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ಬರುವ ಭಕ್ತಾದಿಗಳಿಗೆ ತಂಪು ಪಾನೀಯ ಪ್ರಸಾದ ವಿತರಿಸಿದರು
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರಂಗಸ್ವಾಮಿ, ವಕೀಲರ ಸಂಘದ ಖಜಾಂಚಿ ಶಿಲ್ಪ, ಜಿ.ಪಿ. ಶಿವಪ್ರಸಾದ್, ನವೀನ್, ಚಂದ್ರೇಗೌಡ, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.


























